ವನ್ಯಜೀವಿಗಳ ದಾಳಿ ಹೆಚ್ಚಳ | ಕಾಡಿನೊಳಗೆ ಹೋಗಲು ಅನುಮತಿ ಅಗತ್ಯ : ಕೇರಳ ಸಚಿವ
ಎ.ಕೆ.ಶಶೀಂದ್ರನ್ | Credit: DH File Photo
ತಿರುವನಂತಪುರಂ: ಏರುಗತಿಯಲ್ಲಿರುವ ವನ್ಯಜೀವಿ ದಾಳಿ ನಿದರ್ಶನಗಳ ಕುರಿತು ಕೇರಳದಲ್ಲಿ ವ್ಯಾಪಕ ಪ್ರಮಾಣದ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ, ಇಂತಹ ಎಲ್ಲ ದಾಳಿಗಳು ಜನವಸತಿ ಪ್ರದೇಶಗಳಲ್ಲಿ ಆಗುತ್ತಿಲ್ಲ. ಕಾಡಿನೊಳಗೆ ಹೋಗುವ ಹೊರಗಿನ ಜನರು ಪೂರ್ವಾನುಮತಿ ಪಡೆಯಬೇಕು ಎಂದು ಬುಧವಾರ ಕೇರಳ ರಾಜ್ಯ ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಕಿವಿಮಾತು ಹೇಳಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷದ ಕುರಿತು ತಾವು ಮಂಗಳವಾರ ವಿಧಾನಸಭೆಯ ಶೂನ್ಯ ವೇಳೆ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ.
ವಯನಾಡ್ ನಲ್ಲಿ ಶಂಕಿತ ಆನೆ ದಾಳಿಯಿಂದ ಬುಡಕಟ್ಟು ವ್ಯಕ್ತಿಯೊಬ್ಬರ ಮೃತ್ಯುವಾಗಿದೆ ಎಂದು ಮಂಗಳವಾರ ಶಾಸಕರೊಬ್ಬರು ಪ್ರಸ್ತಾಪಿಸಿದಾಗ, ಇದು ಕಾಡಿನೊಳಗೆ ಹೋಗುತ್ತಿರುವ ಜನರ ಸಮಸ್ಯೆಯಾಗಿದೆ ಎಂದು ಸಚಿವ ಶಶೀಂದ್ರನ್ ವಿಧಾನಸಭೆಗೆ ತಿಳಿಸಿದ್ದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜನರು ಏಕೆ ಕಾಡಿನೊಳಗೆ ಹೋಗುತ್ತಿದ್ದಾರೆ ಎಂಬುದನ್ನು ನಾವು ಯೋಚಿಸಬೇಕಿದೆ. ಇದನ್ನೇ ನಾನು ವಿಧಾನಸಭೆಯಲ್ಲಿ ಹೇಳಿದ್ದು. ಬುಡಕಟ್ಟು ಜನರನ್ನು ಹೊರತುಪಡಿಸಿ ಉಳಿದೆಲ್ಲರೂ ವನ್ಯಜೀವಿ ಸಿಬ್ಬಂದಿಗಳಿಂದ ಅನುಮತಿ ಪಡೆಯಬೇಕಾಗಿದೆ. ಯಾರು ಅನುಮತಿಯಿಲ್ಲದೆ ಕಾಡಿನೊಳಗೆ ಹೋಗುತ್ತಿದ್ದಾರೋ, ಅಂಥವರ ಕುರಿತು ನಾನು ಹೇಳಿದ್ದು” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ಎಲ್ಲರೂ ಜನವಸತಿ ಪ್ರದೇಶಗಳಲ್ಲಿ ನೆಲೆಸಿರುವ ವನ್ಯಜೀವಿಗಳ ಕುರಿತು ದೂರುತ್ತಿದ್ದಾರೆ. ಆದರೆ, ಈ ಎಲ್ಲ ದಾಳಿಗಳೂ ಜನವಸತಿ ಪ್ರದೇಶಗಳಲ್ಲಿ ನಡೆಯುತ್ತಿಲ್ಲ. ಆದರೆ, ಸರಕಾರವು ಇಂತಹ ತಾಂತ್ರಿಕತೆಯತ್ತ ನೋಡಲು ಸಾಧ್ಯವಿಲ್ಲ ಹಾಗೂ ಎಲ್ಲರಿಗೂ ನೆರವು ಒದಗಿಸಲು ಸಾಧ್ಯವಿಲ್ಲ” ಎಂದೂ ಅವರು ಹೇಳಿದ್ದಾರೆ.
ಎತ್ತರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ರಕ್ಷಿಸಲು ಸರಕಾರ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ವಿರೋಧ ಪಕ್ಷಗಳು ಎಡರಂಗ ಸರಕಾರದ ವಿರುದ್ಧದ ತಮ್ಮ ಟೀಕೆಯನ್ನು ತೀವ್ರಗೊಳಿಸಿರುವ ಬೆನ್ನಿಗೇ ಸಚಿವ ಶಶೀಂದ್ರನ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.