×
Ad

ಕಾಂಗ್ರೆಸ್ ವಿರುದ್ಧ ಬಿಜೆಪಿಯ ಕಾರ್ಯಸೂಚಿಯನ್ನು ಹರಡಲು ನಿಮ್ಮ ತಂದೆಯನ್ನೇ ಮರೆತುಬಿಟ್ಟಿರಾ?: ಜ್ಯೋತಿರಾದಿತ್ಯ ಸಿಂಧ್ಯಾರನ್ನು ವ್ಯಂಗ್ಯವಾಡಿದ ಕಾಂಗ್ರೆಸ್

Update: 2025-06-25 20:42 IST

ಜ್ಯೋತಿರಾದಿತ್ಯ ಸಿಂಧ್ಯಾ | PTI 

ಹೊಸದಿಲ್ಲಿ: ತುರ್ತು ಪರಿಸ್ಥಿತಿಯ ವೇಳೆ ನನ್ನ ಅಜ್ಜಿ ತುಂಬಾ ಹೋರಾಡಿದ್ದರು ಎಂದು ಸ್ಮರಿಸಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾಗೆ ಬುಧವಾರ ತಿರುಗೇಟು ನೀಡಿರುವ ಕಾಂಗ್ರೆಸ್, ಕೇವಲ ಬಿಜೆಪಿಯ ಕಾರ್ಯಸೂಚಿಯನ್ನು ಹರಡಲು ನಿಮ್ಮ ತಂದೆ ಮಾಧವ ರಾವ್ ಸಿಂಧ್ಯಾರನ್ನೇ ಮರೆತುಬಿಡುತ್ತೀರಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

1975ರಲ್ಲಿ ಇಂದಿರಾ ಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 'ಸಂವಿಧಾನ ಹತ್ಯೆ ದಿನ'ವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ನನ್ನ ಅಜ್ಜಿ ವಿಜಯರಾಜೇ ಸಿಂಧ್ಯಾ ರಾಜ ಮಾರ್ಗದ ಬದಲು ಸಾರ್ವಜನಿಕ ಸೇವೆಯನ್ನು ಆಯ್ದುಕೊಂಡಿದ್ದರು ಎಂದು ಜ್ಯೋತಿರಾದಿತ್ಯ ಸಿಂಧ್ಯಾ ಸ್ಮರಿಸಿದ್ದರು.

"ಪ್ರಜಾಪ್ರಭುತ್ವ ಹಾಗೂ ಸಾರ್ವಜನಿಕ ಸೇವೆಯೆಡೆಗಿನ ಆಕೆಯ ಅರ್ಪಣಾ ಮನೋಭಾವ ಭಾರತೀಯ ರಾಜಕಾರಣಕ್ಕೆ ಹೊಸ ದಿಕ್ಕು ನೀಡಿತು. ತುರ್ತು ಪರಿಸ್ಥಿತಿಯ ದಿನಗಳಲ್ಲೂ ಆಕೆ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಹೋರಾಡಿದ್ದರು. ಅಂದಿನ ಕಾಂಗ್ರೆಸ್ ಸರಕಾರ ಆಕೆಯನ್ನು ಕಿರುಕುಳ ನೀಡಿ ಹಾಗೂ ದೌರ್ಜನ್ಯಗಳಿಗೆ ಗುರಿಯಾಗಿಸಿತ್ತು" ಎಂದು ಜ್ಯೋತಿರಾದಿತ್ಯ ಸಿಂಧ್ಯಾ ಆರೋಪಿಸಿದ್ದರು.

"ಆಕೆಯನ್ನು ಸೆರೆವಾಸದಲ್ಲಿರಿಲಾಗಿತ್ತು. ಆದರೆ, ಆಕೆ ಅದಕ್ಕೆ ತಲೆಬಾಗಲಿಲ್ಲ ಅಥವಾ ಮಣಿಯಲಿಲ್ಲ ಅಥವಾ ಎದೆಗುಂದಲೂ ಇಲ್ಲ. ಆಕೆ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂವಿಧಾನದ ಬಗೆಗಿನ ಗೌರವದ ಪರ ದೃಢವಾಗಿ ನಿಂತಿದ್ದರು" ಎಂದು 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಜ್ಯೋತಿರಾದಿತ್ಯ ಸಿಂಧ್ಯಾರ ಈ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, "ಪ್ರಿಯ ಮಹಾರಾಜರೇ, ನಿಮ್ಮ ದೈವಾಧೀನ ತಂದೆಯ ಹೆಸರನ್ನು ಎಲ್ಲಿಯೂ ಯಾಕೆ ಉಲ್ಲೇಖಿಸಿಲ್ಲ? ಅಥವಾ ಬಿಜೆಪಿಯ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ನೀವು ಅವರನ್ನು ಸಂಪೂರ್ಣವಾಗಿ ಮರೆತುಬಿಟ್ಟಿರಾ?” ಎಂದು ಛೇಡಿಸಿದ್ದಾರೆ.

"1980ರಲ್ಲಿ ಇಂದಿರಾ ಗಾಂಧಿ ಸರಕಾರದಲ್ಲಿ ಮಾಧವರಾವ್ ಸಿಂಧ್ಯಾ ಸಂಸದರಾಗಿದ್ದರು. ಅವರೇಕೆ ಸಂಘ ಪರಿವಾರದ ವಿರುದ್ಧವಿದ್ದರು ಎಂದು ನೀವು ಎಂದೂ ಅವರನ್ನು ಪ್ರಶ್ನಿಸಲಿಲ್ಲವೆ? ತುರ್ತು ಪರಿಸ್ಥಿತಿಯನ್ನು ವಿರೋಧಿಸುವಲ್ಲಿ ಅವರೇಕೆ ಸಂಘ ಪರಿವಾರವನ್ನು ಬೆಂಬಲಿಸಲಿಲ್ಲ?̧" ಎಂದೂ ಅವರು ಕಾಲೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News