×
Ad

ಕೆಲಸದ ಅವಧಿಯನ್ನು ವಾರಕ್ಕೆ 70 ಅಥವಾ 90 ಗಂಟೆಗೆ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ: ಕೇಂದ್ರ ಸರಕಾರ

Update: 2025-02-04 15:35 IST

ಸಚಿವೆ ಶೋಭಾ ಕರಂದ್ಲಾಜೆ | PC : PTI 

ಹೊಸದಿಲ್ಲಿ: ಗರಿಷ್ಠ ಕೆಲಸದ ಅವಧಿಯನ್ನು ವಾರಕ್ಕೆ 70 ಗಂಟೆ ಅಥವಾ 90 ಗಂಟೆವರೆಗೆ ವಿಸ್ತರಿಸುವ ಯಾವುದೇ ಪ್ರಸ್ತಾಪವನ್ನು ಸರಕಾರ ಪರಿಗಣಿಸುತ್ತಿಲ್ಲ ಎಂದು ಸೋಮವಾರ ಲೋಕಸಭೆಗೆ ತಿಳಿಸಲಾಯಿತು.

ಗರಿಷ್ಠ ಕೆಲಸದ ಅವಧಿಯನ್ನು 70 ಗಂಟೆವರೆಗೆ ಹಾಗೂ 90 ಗಂಟೆವರೆಗೂ ವಿಸ್ತರಿಸಬೇಕು ಎಂದು ಇತ್ತೀಚೆಗೆ ಕೆಲವು ಕಾರ್ಪೊರೇಟ್ ನಾಯಕರು ಪ್ರಸ್ತಾಪ ಮಾಡಿದ್ದರು.

ಈ ಕುರಿತು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆನಗೆ ಲಿಖಿತ ಉತ್ತರ ನೀಡಿದ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, “ಗರಿಷ್ಠ ಕೆಲಸದ ಅವಧಿಯನ್ನು ವಾರಕ್ಕೆ 70 ಗಂಟೆಯಿಂದ 90 ಗಂಟೆವರೆಗೆ ವಿಸ್ತರಿಸುವ ಯಾವುದೇ ಪ್ರಸ್ತಾವವು ಸರಕಾರದ ಪರಿಗಣನೆಯಲ್ಲಿಲ್ಲ” ಎಂದು ತಿಳಿಸಿದ್ದಾರೆ.

ಕಾರ್ಮಿಕ ಖಾತೆಯು ಸಹವರ್ತಿ ಪಟ್ಟಿಯಲ್ಲಿದ್ದು, ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರ ತಮ್ಮ ಸಂಬಂಧಿತ ವ್ಯಾಪ್ತಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುತ್ತವೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರಕಾರದ ಪರಿಧಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಕೇಂದ್ರ ಕೈಗಾರಿಕಾ ಸಂಬಂಧಗಳ ಯಂತ್ರಾಂಗದ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಈ ಕಾನೂನುಗಳ ಪಾಲನೆಯನ್ನು ರಾಜ್ಯಗಳು ತಮ್ಮ ಕಾರ್ಮಿಕ ಕಾನೂನುಗಳ ಜಾರಿ ಯಂತ್ರಾಂಗಗಳ ಮೂಲಕ ಖಾತರಿಪಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನುಗಳ ಪ್ರಕಾರ, ಕೆಲಸದ ಅವಧಿ ಹಾಗೂ ಹೆಚ್ಚುವರಿ ಅವಧಿ ಸೇರಿದಂತೆ ಕೆಲಸದ ಸ್ಥಿತಿಯನ್ನು ಸಂಬಂಧಿತ ರಾಜ್ಯಗಳ ಕೈಗಾರಿಕಾ ಕಾಯ್ದೆ 1948 ಹಾಗೂ ಮಳಿಗೆಗಳು ಹಾಗೂ ಸಂಸ್ಥೆಗಳು ಕಾಯ್ದೆಯನ್ವಯ ನಿಯಂತ್ರಿಸಲಾಗುತ್ತಿದೆ.

ಕಾರ್ಪೊರೇಟ್ ವಲಯ ಸೇರಿದಂತೆ ಬಹುತೇಕ ಸಂಸ್ಥೆಗಳನ್ನು ಮಳಿಗೆಗಳು ಹಾಗೂ ಸಂಸ್ಥೆಗಳು ಕಾಯ್ದೆ ಅಡಿ ನಿಯಂತ್ರಿಸಲಾಗುತ್ತಿದೆ.

ವಾರಕ್ಕೆ 70ರಿಂದ 90 ಗಂಟೆಗಳ ಕೆಲಸದ ಅವಧಿ ಇರಬೇಕು ಎಂಬ ಕೂಗೆದ್ದಿರುವ ಬೆನ್ನಿಗೇ, ಶುಕ್ರವಾರ ಸಂಸತ್ತಿನಲ್ಲಿ ಮಂಡನೆಯಾದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯ ಅಧ್ಯಯನ ವರದಿಯಲ್ಲಿ ವಾರಕ್ಕೆ 60 ಗಂಟೆಗಿಂತ ಹೆಚ್ಚು ದುಡಿಯುವುದರಿಂದ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News