ಝುಬೇರ್ ಪೋಸ್ಟ್‌ಗಳು ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತೆ ಕಂಡು ಬರುತ್ತಿಲ್ಲ: ಅಲಹಾಬಾದ್ ಹೈಕೋರ್ಟ್
ಮುಹಮ್ಮದ್ ಝುಬೇರ್
ಹೊಸದಿಲ್ಲಿ : ಯತಿ ನರಸಿಂಹಾನಂದ ಅವರ ದ್ವೇಷ ಭಾಷಣದ ಕುರಿತ ಪೋಸ್ಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೇರ್ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಆದರೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನ್ಯಾಯಾಲಯ ವಿಸ್ತರಿಸಿದೆ.
ಎಫ್ಐಆರ್ ಅನ್ನು ಪ್ರಶ್ನಿಸಿ ಝುಬೈರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ, ಡಾ. ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ.
ʼಈ ಕುರಿತು ನ್ಯಾಯಯುತ ತನಿಖೆ ಅಗತ್ಯವಿದೆ. ಝುಬೇರ್ ಅವರ ಪೋಸ್ಟ್ ಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತೆ ಕಂಡು ಬರುತ್ತಿಲ್ಲ, ತನಿಖೆಯ ಮೂಲಕ ಮಾತ್ರ ಯಾವುದೇ ಅಪರಾಧವನ್ನು ನಿರ್ಧರಿಸಬಹುದುʼ ಎಂದು ಹೇಳಿದ ನ್ಯಾಯಾಲಯ, ಈ ಕುರಿತ ತನಿಖೆ ಪೂರ್ಣಗೊಳ್ಳುವವರೆಗೆ ಝುಬೈರ್ ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿದೆ.
ವಿವಾದಾತ್ಮಕ ಅರ್ಚಕ ಯತಿ ನರಸಿಂಹಾನಂದ ಸಹಚರ ನೀಡಿದ ದೂರಿನ ಮೇರೆಗೆ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ಝುಬೇರ್ ವಿರುದ್ಧ 2024ರ ಅಕ್ಟೋಬರ್ನಲ್ಲಿ ಗಾಝಿಯಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ಅನ್ನು ಪ್ರಶ್ನಿಸಿ ಝುಬೇರ್ ಹೈಕೋರ್ಟ್ ಮೆಟ್ಟಿಲೇರಿದ್ದರು.