ಅಕಾಲಿದಳ ಮುಖಂಡನಿಂದ ರೂ. 540 ಕೋಟಿ ರೂ. ಡ್ರಗ್ ಹಣ ದುರುಪಯೋಗ: ತನಿಖಾ ಸಂಸ್ಥೆ
PC:x.com/aajtak
ಅಮೃತಸರ: ಮಾದಕವಸ್ತು ಜಾಲದಿಂದ ಬಂದ ಸುಮಾರು 540 ಕೋಟಿ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾಗಿ ಪಂಜಾಬ್ ನ ಮಾಜಿ ಸಚಿವ ಹಾಗೂ ಅಕಾಲಿದಳ ಮುಖಂಡ ಬಿಕ್ರಮ್ ಸಿಂಗ್ ಮಜೀತಿಯಾ ವಿರುದ್ಧ ವಿಶೇಷ ತನಿಖಾ ತಂಡ ಆರೋಪಿಸಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪಂಜಾಬ್ ವಿಚಕ್ಷಣಾ ಬ್ಯೂರೊ ಬುಧವಾರ ಮಜೀತಿಯಾ ಅವರ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿತ್ತು.
ಮೊಹಾನಿ ವಿಚಕ್ಷಣಾ ದಳ (ಫ್ಲೈಯಿಂಗ್ ಸ್ಕ್ವಾಡ್) ಪೊಲೀಸ್ ಠಾಣೆಯಲ್ಲಿ ಎಐಜಿ ಸ್ವರ್ಣದೀಪ್ ಸಿಂಗ್ ವಿವರವಾದ ಏಳು ಪುಟಗಳ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ನಕಲಿ ಕಂಪನಿಗಳಿಗೆ ಸಂಬಂಧಿಸಿದ ವ್ಯವಹಾರಗಳ ಬಗ್ಗೆ, ಅನುಮಾನಾಸ್ಪದ ವಿದೇಶಿ ವಹಿವಾಟು ಮತ್ತು ಅಕ್ರಮ ಸಂಪತ್ತು ಕ್ರೋಢೀಕರಣದ ಬಗ್ಗೆ ತನಿಖೆ ನಡೆಸಿದ ಆಧಾರದಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕ ಸೇವೆಯಲ್ಲಿರುವವರ ಅಪರಾಧ ದುರ್ನಡತೆಗೆ ಸಂಬಂಧಿಸಿದ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ನ ಸೆಕ್ಷನ್ 13(1)(ಬಿ) ಮತ್ತು 13(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರಡಿ ಆರೋಪ ಸಾಬೀತಾದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಏಳು ವರ್ಷಗಳ ವರೆಗೆ ಜೈಲು ಮತ್ತು ದಂಡ ವಿಧಿಸಬಹುದಾಗಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ 2021ರಲ್ಲಿ ಮಜೀತಿಯಾ ವಿರುದ್ಧ ದಾಖಲಾದ ಮಾದಕ ವಸ್ತು ಕಳ್ಳಸಾಗಾಣೆ ಆರೋಪದ ಬಗ್ಗೆ ತನಿಖೆ ನಡೆಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.