×
Ad

ಮಾ. 8ರಂದು ‘ಅಲೋಶಿಯನ್ ಅಲ್ಯುಮ್ನಿ ಪ್ರಶಸ್ತಿ -2025’ ಪ್ರದಾನ

Update: 2025-03-06 13:27 IST

ಮಂಗಳೂರು, ಮಾ.6: ಸೈಂಟ್ ಅಲೋಶಿಯಸ್ ಪ್ರತಿಷ್ಠಾನಗಳು ಮತ್ತು ಸೈಂಟ್ ಅಲೋಶಿಯಸ್ ಕಾಲೇಜ್ ಅಲ್ಯುಮ್ನಿ ಅಸೋಸಿಯೇಶನ್ (ಎಸ್‌ಎಸಿಎಎ) ಸಂಯುಕ್ತವಾಗಿ ಅಲೋಶಿಯನ್ ಅಲ್ಯುಮ್ನಿ ಪ್ರಶಸ್ತಿ -2025 ಕಾರ್ಯಕ್ರಮವನ್ನು ಮಾ. 8ರಂದು ಆಯೋಜಿಸಿದೆ.

ಕಾಲೇಜಿನ ಎಲ್‌ಸಿಆರ್‌ಐ ಬ್ಲಾಕ್‌ನ ಎಲ್.ಎಫ್. ರಸ್ಕೀನಾ ಸಭಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 2025ರ ಅಲೋಶಿಯನ್ ಅಲ್ಯುಮ್ನಿ ಪ್ರಶಸ್ತಿಗೆ ಆಯ್ಕೆಯಾಗಿರುವ ಹೇರಂಭಾ ಇಂಡಸ್ಟ್ರೀಸ್ ಲಿಮಿಟೆಡಂನ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಸಿಐಒ ಆಫ್ ದಿ ಇಯರ್ ಪ್ರಶಸ್ತಿ ವಿಜೇತೆ ಲೂಸಿ ಮರಿಯಪ್ಪ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಬಹು ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ ಆಸ್ಕರ್ ಕಾಂಸೆಸಾವ್, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮೂರು ಉದ್ಯಮಗಳನ್ನು ನಿರ್ವಹಿಸುತ್ತಿರುವ ಜೇಮ್ಸ್ ವಿನ್ಸೆಂಟ್ ಮೆಂಡೋನ್ಸಾರಿಗೆ ಪ್ರದಾನ ಮಾಡಲಾಗುವುದು ಎಂದು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸೈಂಟ್ ಅಲೋಶಿಯಸ್ ಪ್ರತಿಷ್ಠಾನವು ತನ್ನ ಹಳೆಯ ವಿದ್ಯಾರ್ಥಿಗಳ ಯಶಸ್ಸಿನ ಬಗ್ಗೆ ಹೆಮ್ಮೆಪಡುತ್ತದೆ. ಈ ಪ್ರತಿಷ್ಠಿತ ಸಂಸ್ಥೆಯಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆ ಮಾಡಿ, ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈಗಿನ ವಿದ್ಯಾರ್ಥಿಗಳು ಅವರ ಸಾಧನೆಗಳಿಂದ ಪ್ರೇರಣೆ ಪಡೆಯಲು ಹಳೆಯ ವಿದ್ಯಾರ್ಥಿಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ 2008ರಲ್ಲಿ ಪ್ರಾರಂಭಿಸಲಾಯಿತು. 2011ರವರೆಗೆ ಪ್ರತಿ ವರ್ಷ ಆಯೋಜಿಸಲಾಗಿತ್ತು ಮತ್ತು 2014ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. 2014 ರಿಂದ ಈ ಪ್ರಶಸ್ತಿಯನ್ನು ಎಸ್‌ಎಸಿಎಎ ನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮ ಸಂಯೋಜಕ ಎನ್.ಜಿ.ಮೋಹನ್ ಹೇಳಿದರು.

ಈ ಪ್ರಶಸ್ತಿಯಡಿ ಈಗಾಗಲೇ 45 ಜನ ಪ್ರಸಿದ್ದ ಅಲೋಶಿಯನ್‌ಗಳನ್ನು ಗೌರವಿಸಲಾಗಿದೆ. ಈ ಗೌರವಕ್ಕೆ ಪಾತ್ರರಾದ ಕೆಲವು ಗಣ್ಯ ವ್ಯಕ್ತಿಗಳು ಡಾ.ಎನ್. ವಿನಯ ಹೆಗ್ಡೆ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಅನಂತ ಕೃಷ್ಣ (ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷರು), ದೇವಿ ಪ್ರಸಾದ್ ಶೆಟ್ಟಿ, ಯೆನೇಪೋಯ ಅಬ್ದುಲ್ಲಾ ಕುಂಞ, ಜಯರಾಮ್ ಭಟ್ (ಕರ್ನಾಟಕ ಬ್ಯಾಂಕಿನ ಮಾಜಿ ಸಿಇಒ), ಲೆಫ್ಟಿನೆಂಟ್ ಜನರಲ್ ನಂದಾ, ಪದ್ಮಭೂಷಣ ಕೆ.ಕೆ. ವೇಣುಗೋಪಾಲ್ (ಭಾರತ ಸರ್ಕಾರದ ಸೊಲಿಸಿಟರ್ ಜನರಲ್), ಪದ್ಮಭೂಷಣ ಕೆ.ವಿ.ಕಾಮತ್ (ಬ್ರಿಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು) ಮತ್ತು ಎಂ.ವಿ. ನಾಯರ್ (ಕಾರ್ಪೊರೇಷನ್ ಬ್ಯಾಂಕಿನ ಮಾಜಿ ಅಧ್ಯಕ್ಷರು). ಭಾರತ ಸರ್ಕಾರವು ಇತ್ತೀಚೆಗೆ ಎಂ.ವಿ. ನಾಯರ್ ಅವರನ್ನು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಸಾಸ್ಟಕ್ಟರ್ ಅಂಡ್ ಡೆವಲಪ್‌ಮೆಂಟ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಕ ಮಾಡಿದೆ ಎಂದು ಎಸ್‌ಎಸಿಎಎಯ ಅಧ್ಯಕ್ಷ ಅನಿಲ್ ಕುಮಾರ್ ಜೆ. ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಎಸ್‌ಸಿಎಎಯ ಕಾರ್ಯದರ್ಶಿ ಕೊನಾರ್ಡ್ ನಝರೆತ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News