×
Ad

ಮಕ್ಕಳಲ್ಲಿ ಮೊಬೈಲ್ ಬಳಕೆ ತಂದ ಆತಂಕ : ಶೇ.42ರಷ್ಟು ಆನ್‌ಲೈನ್ ಲೈಂಗಿಕ ದೌರ್ಜನ್ಯ; ಶೇ.43ರಷ್ಟು ಬೆದರಿಕೆ

Update: 2025-06-15 07:11 IST

ಸಾಂದರ್ಭಿಕ ಚಿತ್ರ PC: freepik

ಬೆಂಗಳೂರು: ಇಂದಿನ ಡಿಜಿಟಲ್ ಕ್ರಾಂತಿಗಳು ತಂದೊಡ್ಡುತ್ತಿರುವ ಪ್ರತಿಕೂಲ ಸ್ಥಿತಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಆನ್‌ಲೈನ್ ಲೈಂಗಿಕ ದೌರ್ಜನ್ಯ ಮತ್ತು ನಿಂದನೆಗೆ ಬಲಿಯಾಗುತ್ತಿರುವುದನ್ನು ತಡೆಯಲು, ಬೆದರಿಕೆಗಳನ್ನು ನಿರ್ವಹಿಸಲು ಪೋಷಕರು, ಶಿಕ್ಷಕರು ಮತ್ತು ಸರಕಾರವು ಸೂಕ್ತ ನಿಯಮಗಳನ್ನು ರೂಪಿಸಲು ವಿಫಲತೆ ಕಂಡಿರುವುದನ್ನು ಅಧ್ಯಯನ ವರದಿಗಳು ಹೇಳುತ್ತಿವೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಸಿದ್ಧಪಡಿಸಿರುವ ‘ರಾಜ್ಯದಲ್ಲಿ ಮಕ್ಕಳ ಆನ್‌ಲೈನ್ ಅಪಾಯಗಳ ಕುರಿತು ವಿಶೇಷ ಅಧ್ಯಯನ’ ವರದಿಯಲ್ಲಿ ಆನ್‌ಲೈನ್ ಬಳಕೆ ಹಾಗೂ ಮೊಬೈಲ್ ಗೀಳಿನಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಕುರಿತು ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

5 ಜಿಲ್ಲೆಗಳಲ್ಲಿ ಅಧ್ಯಯನ: ಬೆಂಗಳೂರು, ಚಿಕ್ಕಮಗಳೂರು, ಚಾಮರಾಜನಗರ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ 8 ರಿಂದ 18 ವರ್ಷ ವಯಸ್ಸಿನ 903 ಶಾಲಾ ಮಕ್ಕಳನ್ನು ಅವರ ಹಾವಭಾವ, ಆನ್‌ಲೈನ್-ಮೊಬೈಲ್ ಬಳಕೆ ಕುರಿತಂತೆ ಬಹು ಹಂತದ ಮಾದರಿಯಲ್ಲಿ ಸಂದರ್ಶಿಸಿ ಅಧ್ಯಯನ ನಡೆಸಲಾಗಿದೆ. ಈ ವರದಿಯಂತೆ 8 ರಿಂದ 11 ವರ್ಷ ವಯಸ್ಸಿನ ಮಕ್ಕಳು ಶೇ.87ರಷ್ಟು ಮೊಬೈಲ್-ಆನ್‌ಲೈನ್ ಬಳಕೆ ಮಾಡುತ್ತಿದ್ದರೆ, ಉಳಿದಂತೆ 15ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ.99ರಷ್ಟು ಬಾಲಕರು ಮತ್ತು ಶೇ.100ರಷ್ಟು ಬಾಲಕಿಯರು ಮೊಬೈಲ್ ಗೀಳಿಗೆ ತುತ್ತಾಗಿದ್ದಾರೆ. ಅವರಲ್ಲಿ ಸುಮಾರು ಶೇ.5ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ಕೆಟ್ಟ ಅನುಭವಗಳಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.

ಶೇ.42ರಷ್ಟು ಮಕ್ಕಳಿಗೆ ಆನ್‌ಲೈನ್ ಲೈಂಗಿಕ ದೌರ್ಜನ್ಯ: ಅಧ್ಯಯನ ನಡೆಸಿದ ಐದು ಜಿಲ್ಲೆಗಳಲ್ಲಿ ಶೇ.42ರಷ್ಟು ಪೋಷಕರು ತಮ್ಮ ಮಗು ಆನ್‌ಲೈನ್ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದೆ ಎಂದು ತಿಳಿಸಿದ್ದು, ಶೇ.43ರಷ್ಟು ಮಕ್ಕಳು ಆನ್‌ಲೈನ್ ಬೆದರಿಕೆ, ಶೇ.32ರಷ್ಟು ಲೈಂಗಿನ ಗ್ರೂಮಿಂಗ್, ಶೇ.30ರಷ್ಟು ಮಕ್ಕಳು ಲೈಂಗಿಕವಾಗಿ ವಸ್ತುಗಳ ವಿನಿಮಯದಂಥ ಪ್ರಕರಣಗಳಿಗೆ ಒಳಪಟ್ಟಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಆನ್‌ಲೈನ್ ಲೈಂಗಿಕ ದೌರ್ಜನ್ಯ ಹಾಗೂ ಮಕ್ಕಳ ಮೇಲಿನ ದಬ್ಬಾಳಿಕೆ/ಬೆದರಿಕೆ ಕುರಿತಂತೆ ಶೇ.46ರಷ್ಟು ಪ್ರಕರಣಗಳಲ್ಲಿ ಮಕ್ಕಳೇ ತಮ್ಮ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

ಉಳಿದಂತೆ ಆನ್‌ಲೈನ್ ಚಟುವಟಿಕೆ ಮೇಲೆ ನಿಗಾವಹಿಸಿ ಶೇ.27ರಷ್ಟು ಪ್ರಕರಣಗಳು, ಮಕ್ಕಳ ಅಸ್ವಾಭಾವಿಕ ನಡವಳಿಕೆಯಿಂದ ಶೇ.18ರಷ್ಟು ಹಾಗೂ ಶೇ.9ರಷ್ಟು ಪ್ರಕರಣಗಳು ಮಗು ಬೇರೊಬ್ಬರಿಗೆ ಹೇಳಿ ಅವರಿಂದ ಪೋಷಕರಿಗೆ ತಿಳಿದುಬಂದಿದೆ ಎಂದು ವರದಿಯು ತಿಳಿಸಿದೆ.

ಶೇ.50ರಷ್ಟು ಮಕ್ಕಳ ಜಾಲತಾಣದ ಖಾತೆ ರದ್ದು: ಈ ರೀತಿಯಲ್ಲಿ ಮಕ್ಕಳ ಮೇಲೆ ಆನ್‌ಲೈನ್ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪತ್ತೆಯಾದ ನಂತರದಲ್ಲಿ ಶೇ.50ರಷ್ಟು ಪೋಷಕರು ತಮ್ಮ ಮಕ್ಕಳ ಸಾಮಾಜಿಕ ಜಾಲತಾಣದ ಖಾತೆಗಳನ್ನು ರದ್ದು ಪಡಿಸಿದ್ದಾರೆ. ಶೇ.46ರಷ್ಟು ಪೋಷಕರು ದೌರ್ಜನ್ಯ ಎಸಗುವವರ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ ಎಂದು ವರದಿಯು ತಿಳಿಸಿದೆ. ಉಳಿದಂತೆ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣದ ಬಳಕೆ ಕುರಿತ ಜಾಗೃತಿ ಮೂಡಿಸುವ ಕಾರ್ಯವನ್ನು ಹಲವು ಪೋಷಕರು ಮಾಡಿದ್ದಾರೆ ಎಂದು ಅಧ್ಯಯನ ವರದಿಯಿಂದ ಗೊತ್ತಾಗಿದೆ.

ವರದಿ ಪ್ರಕಾರ, 12ರಿಂದ 14 ವರ್ಷ ವಯಸ್ಸಿನ ಶೇ.97ರಷ್ಟು ಮಕ್ಕಳು ಯೂಟ್ಯೂಬ್ ಬಳಕೆ ಮಾಡುತ್ತಿದ್ದಾರೆ. ಶೇ.92ರಷ್ಟು ಮಕ್ಕಳು ವಾಟ್ಸ್‌ಆ್ಯಪ್, ಶೇ.73ರಷ್ಟು ಮಕ್ಕಳು ಸರ್ಚ್ ಇಂಜಿನ್ ಬಳಸುವುದು ತಿಳಿದುಬಂದಿದೆ. ಅದರಲ್ಲೂ 15ರಿಂದ 18 ವಯೋಮಾನದ ಶೇ.25ರಷ್ಟು ಮಕ್ಕಳು ದಿನದಲ್ಲಿ ಒಂದು ಗಂಟೆಗೂ ಹೆಚ್ಚಿನ ಸಮಯ ಮೊಬೈಲ್ ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಪರಿಚಿತರೊಂದಿಗೆ ಸ್ನೇಹ: 15ರಿಂದ 18 ವರ್ಷ ವಯಸ್ಸಿನ ಮಕ್ಕಳ ಪೈಕಿ ಶೇ.16ರಷ್ಟು ಮಕ್ಕಳು ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಉದ್ದೇಶದೊಂದಿಗೆ ಮೊಬೈಲ್ ಬಳಕೆ ಮಾಡಿದ್ದಾರೆ. ಅವರಲ್ಲಿ ಶೇ.10ರಷ್ಟು ಮಕ್ಕಳು ಆನ್‌ಲೈನ್ ಮೂಲಕ ಸ್ನೇಹ ಬೆಳೆಸಿದ ಅಪರಿಚಿತರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಅದರಲ್ಲಿ ಶೇ.7ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ತಮ್ಮ ವೈಯಕ್ತಿಕ ಮಾಹಿತಿ, ಶೇ.2ರಷ್ಟು ಮಕ್ಕಳು ವೈಯಕ್ತಿಕ ವಿಡಿಯೋ ಹಾಗೂ ಶೇ.8ರಷ್ಟು ಮಕ್ಕಳು ವೈಯಕ್ತಿಕ ಫೋಟೊ ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಗ್ರಾಮೀಣ ಮಕ್ಕಳಿಂದಲೇ ಹೆಚ್ಚು ಮೊಬೈಲ್ ಬಳಕೆ: ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿನ ಮಕ್ಕಳ ಅಧ್ಯಯನ ನಡೆಸಲಾಗಿದ್ದು, ಅದರಲ್ಲಿ ಶೇ.97ರಷ್ಟು ಗ್ರಾಮೀಣ ಭಾಗದ ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಅದೇ ನಗರ ಪ್ರದೇಶದ ಶೇ.93ರಷ್ಟು ಮಕ್ಕಳು ಮಾತ್ರ ಮೊಬೈಲ್, ಲ್ಯಾಪ್‌ಟಾಪ್ ಬಳಸುತ್ತಿದ್ದಾರೆ. ಒಟ್ಟಾರೆ ಮಕ್ಕಳ ಪೈಕಿ 8ರಿಂದ 11 ವರ್ಷ ವಯಸ್ಸಿನವರಲ್ಲಿ ಶೇ.96ರಷ್ಟು, 15ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ.71ರಷ್ಟು ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.

ಅಧಿವೇಶನದಲ್ಲಿ ಚರ್ಚೆ

ಅಪ್ರಾಪ್ತ ವಯಸ್ಸಿನ ಮಕ್ಕಳು ಆನ್‌ಲೈನ್ ಲೈಂಗಿಕ ಕಿರುಕುಳ ಮತ್ತು ಮೊಬೈಲ್ ಗೀಳಿಗೆ ಒಳಗಾಗಿರುವುದರ ಕುರಿತು ಗಂಭೀರ ಚರ್ಚೆಗಳು ನಡೆಯಬೇಕಿದೆ. ಅದಕ್ಕಾಗಿ ಮುಂಬರುವ ಮುಂಗಾರು ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲಿ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೇನೆ. ಇದರ ತಡೆಗೆ ಸೂಕ್ತ ನಿಯಮ ರೂಪಿಸಲು ನಿರ್ಣಯಿಸಲಾಗುವುದು ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಲ್ಲೂರು

contributor

Similar News