×
Ad

19-20: ಜನನುಡಿ ಸಾಹಿತಿ ದೇವನೂರ ಮಹಾದೇವರಿಂದ ಕಾರ್ಯಕ್ರಮ ಉದ್ಘಾಟನೆ

Update: 2015-12-17 15:19 IST

ನಗರದ ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಡಿ.19 ಮತ್ತು 20ರಂದು ನಡೆಯಲಿರುವ 2 ದಿನಗಳ ಜನನುಡಿಯನ್ನು ಸಾಹಿತಿ ದೇವನೂರ ಮಹಾದೇವ ಉದ್ಘಾಟಿಸಲಿದ್ದಾರೆ. ಅಭಿಮತ ಮಂಗಳೂರು ವತಿಯಿಂದ ನಡೆಯುತ್ತಿರುವ 3ನೆ ವರ್ಷದ ಜನನುಡಿಯ ಬಗ್ಗೆ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಡಾ. ಭೂಮಿಗೌಡ, 19ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಗೋಷ್ಠಿ ನಡೆಯಲಿದೆ ಎಂದರು.

ಈ ಬಾರಿಯ ಜನನುಡಿಯಲ್ಲಿ ‘ನುಡಿಮಾರ್ಗ’, ‘ಮುಸ್ಲಿಮರ ತವಕ ತಲ್ಲಣಗಳು’, ‘ಅಭಿವೃದ್ಧಿಯ ಸವಾಲುಗಳು’ ಮತ್ತು ‘ಮತೀಯ ಅಸಹಿಷ್ಣುತೆ’ ಎಂಬ ವಿಷಯಗಳ ಮೇಲೆ ನಾಲ್ಕು ಗೋಷ್ಠಿಗಳು ನಡೆಯಲಿವೆ. ಡಿ.19ರಂದು ಸಂಜೆ ಮೈಸೂರಿನ ಗುರುರಾಜ ತಂಡ ಮಲೆಮಹದೇಶ್ವರ ಮಂಟೆಸ್ವಾಮಿ ಕಾವ್ಯವನ್ನು ತಂಬೂರಿ ಜನಪದ ಗಾಯನದ ಮೂಲಕ ಪ್ರಸ್ತುತ ಪಡಿಸಲಿದೆ. ಕಾರ್ಯಕ್ರಮದಲ್ಲಿ ಕಡಿದಾಳು ಶಾಮಣ್ಣ, ಡಾ.ಸಿ.ಎಸ್. ದ್ವಾರಕಾನಾಥ್, ಕೋಟಿಗಾನಹಳ್ಳಿ ರಾಮಯ್ಯ, ಬಾನು ಮುಷ್ತಾಕ್, ಪ್ರೊ.ರಹಮತ್ ತರೀಕೆರೆ, ಡಿ.ಉಮಾಪತಿ, ದಿನೇಶ್ ಅಮೀನ್‌ಮಟ್ಟು, ಶಶಿಧರ್ ಭಟ್, ಡಾ. ಚಂದ್ರ ಪೂಜಾರಿ, ಡಾ. ಮುಝಫ್ಫರ್ ಅಸಾದಿ, ಪ್ರೊ.ಬಿ.ಗಂಗಾಧರ ಮೂರ್ತಿ, ಕೆ.ಎಸ್. ವಿಮಲಾ, ಡಾ.ಕೆ.ಶರೀಫಾ, ಡಾ.ಎಚ್. ವಿ. ವಾಸು, ಹುಲಿಕುಂಟೆ ಮೂರ್ತಿ, ಪೀರ್ ಬಾಷಾ, ಲಕ್ಷ್ಮಣ ಹೂಗಾರ್, ಇಂದಿರಾ ಕೃಷ್ಣಪ್ಪ, ನರೇಂದ್ರ ನಾಯಕ್, ಡಾ. ಆರ್. ಸುನಂದಮ್ಮ, ಎಚ್.ಎಸ್. ಅನುಪಮಾ, ಜಾನ್ ಫೆರ್ನಾಂಡಿಸ್, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಬಿ.ಟಿ. ಜಾಹ್ನವಿ, ಸಂವರ್ಥ ಸಾಹಿಲ್ ಮತ್ತಿತರರು ಭಾಗವಹಿಸಲಿದ್ದಾರೆ. ಡಾ.ಕೆ.ವೈ. ನಾರಾಯಣ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯ ಆಶಯ ಭಾಷಣವನ್ನು ಟಿ.ಕೆ. ದಯಾನಂದ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಉಚಿತ ಊಟ- ವಸತಿ

  ಜನನುಡಿಯಲ್ಲಿ ಭಾಗವಹಿಸಲು ಹೊರ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಾ.ಭೂಮಿಗೌಡ ತಿಳಿಸಿದರು. ಜನನುಡಿಯಲ್ಲಿ ಪ್ರತ್ಯೇಕವಾಗಿ ‘ಮುಸ್ಲಿಮರ ತವಕ ತಲ್ಲಣ ಗಳು ಗೋಷ್ಠಿ ಯಾಕೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುನೀರ್ ಕಾಟಿಪಳ್ಳ, ಗೋಷ್ಠಿಯು ಕೇವಲ ವಿಚಾರ ಮಂಡನೆ ಮಾತ್ರ ಆಗಿರದೆ, ಸಂವಾದ ರೀತಿಯಲ್ಲಿ ನಡೆಯಲಿದೆ. ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯವಾಗಿ ಅಸಹಿಷ್ಣುತೆ, ಅಹಿತಕರ ಬೆಳವಣಿಗೆಯ ಭಾಗವಾಗಿ ಬಿಂಬಿಸಲ್ಪಡುತ್ತಿರುವ ಮುಸ್ಲಿಮ್ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಹಾಗೂ ಮುಸ್ಲಿಮ್ ಸಮುದಾಯದೊಳಗಿನ ಅಪಾಯಗಳ ಬಗ್ಗೆಯೂ ಚಿಂತಕರು ಮಾತನಾಡಲಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಡಾ. ವಾಸುದೇವ ಬೆಳ್ಳೆ, ಜ್ಯೋತಿ ಚೇಳ್ಯಾರು, ವಾಸುದೇವ ಉಚ್ಚಿಲ್, ಜೀವನ್‌ರಾಜ್ ಕುತ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News