ಪುಣೆ ಇನ್ಫೋಸಿಸ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ: ಇಬ್ಬರು ನೌಕರರ ಬಂಧನ
ಪುಣೆ, ಡಿ.29: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಇಲ್ಲಿನ ಇನ್ಫೋಸಿಸ್ ಆವರಣದ ಇಬ್ಬರು ಉದ್ಯೋಗಿಗಳನ್ನು ಮಂಗಳವಾರ ಬಂಧಿಸಲಾಗಿದೆ.
ಪುಣೆಯ ಇನ್ಫೋಸಿಸ್ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಮಹಿಳಾ ಕ್ಯಾಶಿಯರ್ ಕ್ಯಾಂಟೀನ್‌ನ ಒಳಗಡೆ ಇಬ್ಬರು ವ್ಯಕ್ತಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಇನ್ಫೋಸಿಸ್‌ನ ಇಬ್ಬರು ಹೌಸ್‌ಕೀಪರ್‌ಗಳು ಅತ್ಯಾಚಾರ ಆರೋಪಿಗಳಾಗಿದ್ದು, ಡಿ.27ರಂದು ಈ ಘಟನೆ ನಡೆದಿದೆ.
ಆರೋಪಿ ಗಳಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಶೌಚಾಲಯದೊಳಗೆ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದು, ಇನ್ನೊಬ್ಬ ಅದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದನೆಂದು ವರದಿ ತಿಳಿಸಿದೆ.
ಘಟನೆಯ ಬಗ್ಗೆ ಯಾರಲ್ಲೂ ಬಾಯ್ಬಿಡಬಾರದು. ತಿಳಿಸಿದಲ್ಲಿ ಅತ್ಯಾಚಾರದ ಚಿತ್ರಗಳನ್ನು ಬಹಿರಂಗಪಡಿಸುವೆನೆಂದು ಆರೋಪಿಗಳು ಮಹಿಳೆಗೆ ಧಮಕಿ ಹಾಕಿದರೆನ್ನಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಇನ್ಫೋಸಿಸ್, ಸಂಸ್ಥೆಯು ತನಿಖೆಗೆ ಸಹಾಯ ಮಾಡಲು ಪೊಲೀಸರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ತಾವು ಕಠಿಣ ಸುರಕ್ಷಾ ಕ್ರಮಗಳನ್ನು ಹೊಂದಿದ್ದು, ಗುತ್ತಿಗೆ ಸಿಬ್ಬಂದಿ ಸೇರದಂತೆ ಯಾರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಶೂನ್ಯ ಸಹನೆ ಹೊಂದಿರುತ್ತೇವೆಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.