ಹೆಣ್ಣು ಹುಲಿ ಕಾಣೆೆ: 4 ಮರಿಗಳ ಸಾವು ಸಿಬಿಐ ನೆರವು ಕೇಳಿದ ಮಹಾರಾಷ್ಟ್ರ ಅರಣ್ಯ ಇಲಾಖೆ
ನಾಗಪುರ, ಡಿ,29: ಚಂದ್ರಪುರ ರಕ್ಷಿತಾರಣ್ಯದಿಂದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿರುವ ಹೆಣ್ಣು ಹುಲಿಯೊಂದನ್ನು ಯಾರೋ ಕಳ್ಳ ಬೇಟೆಯಾಡಿದ್ದಾರೆ ಅಥವಾ ಇತರ ಕಾರಣಗಳಿಂದ ಸತ್ತು ಹೋಗಿರಬೇಕೆಂದು ಮಹಾರಾಷ್ಟ್ರದ ವನ್ಯಮೃಗ ಇಲಾಖೆಯು ಶಂಕಿಸಿದೆ.
ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂತಿಮಾರ್ ಈ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ರಾಜ್ಯದ ವನ್ಯಮೃಗ ಇಲಾಖೆಯು ಸಿಬಿಐ ನೆರವು ಯಾಚಿಸಿದೆ.
ಹೆಣ್ಣು ಹುಲಿಯನ್ನು ಪತ್ತೆ ಹಚ್ಚಲು 10-12 ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯವಾಗಿ ಒಂದೆರಡು ತಿಂಗಳು ಪ್ರಾಯದ ಮರಿಗಳನ್ನು ಪಡೆದಿರುವ ವ್ಯಾಘ್ರಿಣಿ ಬೇಟೆಗಾಗಿ ಅರ್ಧ ಕಿ.ಮೀ.ಗಿಂತ ಹೆಚ್ಚು ದೂರಕ್ಕೆ ಹೋಗುವುದಿಲ್ಲ. ಆದರೆ, ಪ್ರದೇಶದಲ್ಲಿ ಹುಲಿಯ ಗರ್ಜನೆಯಾಗಲಿ ಹೆಜ್ಜೆ ಗುರುತಾಗಲಿ ಕಂಡು ಬರದಿರುವುದರಿಂದಾಗಿ ಅದು ಸತ್ತಿರಬಹುದೆಂದು ತಾವು ಭೀತಿಪಡುತ್ತಿದ್ದೇವೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಭಗವಾನ್ ಹೇಳಿದ್ದಾರೆ.
ಈ ಸಂಬಂಧ ಮಾಹಿತಿಯೊದಗಿಸುವಂತೆ ತಾನು ಸಿಬಿಐ ಜಂಟಿ ನಿರ್ದೇಶಕ ಕೇಶವ ಕುಮಾರರೊಂದಿಗೆ ಮಾತನಾಡಿದ್ದೇನೆ. ಕುಮಾರ್ ಕಳ್ಳ ಬೇಟೆ ಪ್ರಕರಣಗಳ ತನಿಖೆಯ ದಾಖಲೆ ಹೊಂದಿದ್ದಾರೆಂದು ರಾಜ್ಯದ ವನ್ಯಜೀವಿ ವಾರ್ಡನ್ ಸಹ ಆಗಿರುವ ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಹೆಣ್ಣು ಹುಲಿಯ ನಾಲ್ಕು ಮರಿಗಳು ಹಸಿವಿನಿಂದ ಸತ್ತಿರುವುದು ರವಿವಾರ ಚಂದ್ರಪುರ ಜಿಲ್ಲೆಯ ಸಾವೊಲಿ ಅರಣ್ಯದಲ್ಲಿ ಪತ್ತೆಯಾಗಿದೆ. ಮೂರು ಮೊದಲೇ ಸತ್ತಿದ್ದು, ಒಂದು ಚಿಕಿತ್ಸೆಯ ವೇಳೆ ಅಸು ನೀಗಿದೆ. ನಾಲ್ಕನೆ ಮರಿಯು ಮಹಾರಾಷ್ಟ್ರದ ಅರಣ್ಯಾಧಿಕಾರಿ ನಿಗಮದ ಸುಪರ್ದಿಯಲ್ಲಿರುವ ಪಥರಿ ಅರಣ್ಯದ ಗೋಸಿಖುರ್ದ್ ಕಾಲುವೆಯ ಬಳಿ ಪತ್ತೆಯಾಗಿತ್ತು.
ಕಾಲುವೆ ದಾಟುತ್ತಿದ್ದ ಪಥರಿ ಗ್ರಾಮಸ್ಥರಿಗೆ ಮೂರು ಹುಲಿ ಮರಿಗಳ ಕಳೇಬರಗಳು ಕಾಣಿಸಿಕೊಂಡಿದ್ದವು. ಅವರದನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರು. ಹುಡುಕಾಟದ ವೇಳೆ ಅರಣ್ಯಾಧಿಕಾರಿಗಳಿಗೆ ಕಾಲುವೆ ಬಳಿ ಅಲೆಯುತ್ತಿದ್ದ ನಾಲ್ಕನೆ ಹುಲಿ ಮರಿ ಕಂಡು ಬಂದಿತ್ತು. ಅದು ಚಿಕಿತ್ಸಾಲಯದಲ್ಲಿ ಅಸು ನೀಗಿತು.