ರಾಮ ಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿರುವ ಹಣದ ಲೆಕ್ಕ ಕೊಡಿ ಬಿಜೆಪಿಗೆ ಕಾಂಗ್ರೆಸ್ ತಾಕೀತು

Update: 2015-12-31 12:24 GMT

ಹೊಸದಿಲ್ಲಿ,ಡಿ.30: ಕಳೆದ 30 ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿರುವ ಹಣದ ವಿವರಗಳನ್ನು ನೀಡುವಂತೆ ಬುಧವಾರ ಬಿಜೆಪಿಗೆ ಸೂಚಿಸಿರುವ ಕಾಂಗ್ರೆಸ್,ಹಣದ ಗತಿ ಏನಾಗಿದೆ ಎಂಬ ಬಗ್ಗೆ ತನಿಖೆಗೆ ಆಗ್ರಹಿಸಿದೆ.
ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರು, ಈ ದೇಶದ ಜನತೆ ಏನನ್ನು ಬಯಸುತ್ತಿದ್ದಾರೆ ಎನ್ನುವ ಬಗ್ಗೆ ಸುಳಿವೂ ಬಿಜೆಪಿಯವರಿಗಿಲ್ಲ, ಆದರೆ ಖಂಡಿತವಾಗಿಯೂ ಅವರು ಸಮಾಜವನ್ನು ಧ್ರುವೀಕರಿಸುವ ಮೂಲಕ ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು ಗೆಲ್ಲಲು ಬಯಸಿದ್ದಾರೆ. ಚುನಾವಣೆಗಳು ಸನ್ನಿಹಿತವಾದಾಗಲೆಲ್ಲ ಅವರು ಮೂಲೆಗುಂಪಾಗಿರುವ ರಾಮ ಮಂದಿರ ವಿಷಯವನ್ನು ಎಳೆದು ತಂದು ತಮ್ಮ ‘ಸೈದ್ಧಾಂತಿಕ ಬದ್ಧತೆ’ಯನ್ನಾಗಿ ಜನರ ಮುಂದಿಡುತ್ತಿದ್ದಾರೆ ಎಂದು ಹೇಳಿದರು.
1986-2016ರ ಮಧ್ಯೆ ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಎಷ್ಟು ಹಣ ಸಂಗ್ರಹಿಸಲಾಗಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಆ ಹಣದ ಗತಿ ಏನಾಗಿದೆ ಎಂದು ಅವರು ಪ್ರಶ್ನಿಸಿದರು.
1988-89ರಲ್ಲಿ ರಾಮ ಮಂದಿರದ ಹೆಸರಿನಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 600 ಕೋ.ರೂ. ಸ್ವಿಸ್ ಬ್ಯಾಂಕ್ ಖಾತೆಯೊಂದರಲ್ಲಿ ಇಡಲಾಗಿತ್ತು ಎಂದು ಆದಾಯ ತೆರಿಗೆ ಅಧಿಕಾರಿ ವಿಶ್ವಬಂಧು ದಾಸ್ ಎನ್ನುವವರು ತನ್ನ ವರದಿಯಲ್ಲಿ ಹೇಳಿದ್ದಾರೆನ್ನಲಾಗಿದೆ ಎಂದ ಅವರು, ಹೀಗಾಗಿ ಈ ಎಲ್ಲ ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ ಅದಷ್ಟೂ ಹಣವೇನಾಗಿದೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾಗಿದೆ ಎಂದರು.

 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಗಿದ್ದ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಕೇಂದ್ರವು ಬದ್ಧವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು ಮಂಗಳವಾರ ನೀಡಿದ್ದ ಹೇಳಿಕೆಯ ಬೆನ್ನಿಗೇ ತಿವಾರಿಯವರ ಈ ಪ್ರತಿಕ್ರಿಯೆ ಹೊರಬಿದ್ದಿದೆ. ಮಂದಿರ ಆದಷ್ಟು ಶೀಘ್ರ ನಿರ್ಮಾಣಗೊಳ್ಳಬೇಕೆಂದು ಈ ದೇಶದ ಜನರು ಬಯಸುತ್ತಿದ್ದಾರೆಂದು ತನ್ನ ಪಕ್ಷ ಮತ್ತು ಸರಕಾರ ಈಗಾಗಲೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ ಎಂದು ಶರ್ಮಾ ಹೇಳಿದ್ದರು. ಡಿ.20ರಂದು ರಾಜಸ್ಥಾನದ ಭರತಪುರದಿಂದ ಹೊಸದಾಗಿ ಕಲ್ಲುಗಳನ್ನು ತರಿಸಿ, ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ನಿವೇಶನದಿಂದ ಕೇವಲ ಎರಡು ಕಿ.ಮೀ.ದೂರದಲ್ಲಿರುವ ಕರಸೇವಕ ಪುರಂನಲ್ಲಿಯ ವಿಶ್ವ ಹಿಂದೂ ಪರಿಷತ್‌ನ ಪ್ರಾದೇಶಿಕ ಕೇಂದ್ರ ಕಚೇರಿ ಬಳಿಯ ಐದು ಎಕರೆ ಜಾಗದಲ್ಲಿ ದಾಸ್ತಾನು ಮಾಡಿರುವ ಹಿನ್ನೆಲೆಯಲ್ಲಿ ಮಂದಿರ ವಿವಾದ ಮತ್ತೆ ಸುದ್ದಿ ಮಾಡಿದೆ.
ಮುಸ್ಲಿಮ್ ನಾಯಕರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಜ್ಯಸಭೆಯಲ್ಲಿಯೂ ಕೋಲಾಹಲ ಸೃಷ್ಟಿಯಾಗಿತ್ತು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಕೋಮು ಭಾವನೆಯನ್ನು ಕೆರಳಿಸಲು ಎನ್‌ಡಿಎ ಸರಕಾರವು ಉದ್ದೇಶಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News