×
Ad

ಬಾಂಗ್ಲಾದೇಶ ಬ್ಲಾಗರ್ ಹತ್ಯೆ ಪ್ರಕರಣ: ಇಬ್ಬರಿಗೆ ಮರಣ ದಂಡನೆ

Update: 2015-12-31 23:43 IST

ಢಾಕಾ, ಡಿ.31: ಮೂರು ವರ್ಷಗಳ ಹಿಂದೆ ಢಾಕಾದ ನಿವಾಸದಲ್ಲಿ ಜಾತ್ಯತೀತ ಬ್ಲಾಗರ್, ಅಹ್ಮದ್ ರಜೀಬ್ ಹೈದರ್ ಎಂಬವರ ಹತ್ಯೆ ನಡೆಸಿದ್ದ ಪ್ರಕರಣದಲ್ಲಿ ಬಾಂಗ್ಲಾದೇಶದ ನ್ಯಾಯಾಲಯವೊಂದು ಇಬ್ಬರು ವಿದ್ಯಾರ್ಥಿ ಗಳಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಅದು ನಿಷೇಧಿತ ಅನ್ಸಾರುಲ್ಲಾ ಬಾಂಗ್ಲಾ ಟೀಂನ ವರಿಷ್ಠನ ಸಹಿತ ಇತರ 6 ಮಂದಿಗೆ ವಿವಿಧ ಅವಧಿಗಳ ಸೆರೆವಾಸವನ್ನೂ ವಿಧಿಸಿದೆ.

7 ಮಂದಿ ಆರೋಪಿಗಳ ಮುಂದೆ ವಿಶೇಷ ವಿಚಾರಣಾ ನ್ಯಾಯಾಧಿಕರಣ-3ರ ನ್ಯಾಯಾಧೀಶ ಸೈಯದ್ ಅಹ್ಮದ್ ತೀರ್ಪು ಘೋಷಿಸಿದ್ದಾರೆ. ಮರಣದಂಡನೆ ವಿಧಿಸಲ್ಪಟ್ಟಿರುವ ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ನ್ಯಾಯಾಧೀಶರು, ಖಾಸಗಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಗಳಾದ ಮುಹಮ್ಮದ್ ಫೈಸಲ್ ಬಿನ್ ನಯೀಮ್ ಅಲಿಯಾಸ್ ದ್ವೀಪ್ ಹಾಗೂ ತಲೆ ಮರೆಸಿಕೊಂಡಿರುವ ರೆಡ್ಸಾನುಲ್ ಆಝಾದ್ ರಾಣಾ ಎಂಬವರಿಗೆ ಮರಣ ದಂಡನೆ ಹಾಗೂ ತಲಾ 10 ಸಾವಿರ ಟಾಕಾ ದಂಡ ವಿಧಿಸಿದ್ದಾರೆ.

ಮಕ್ಸುದುಲ್ ಹಸನ್ ಅಲಿಯಾಸ್ ಅನಿಕ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ಟಾಕಾ ದಂಡ, ಮುಹಮ್ಮದ್ ಎಹ್ಸಾನ್ ರೆಝಾ ಅಲಿಯಾಸ್ ರುಮ್ಮಾನ್, ಮಯೀಮ್ ಸಿಕ್ದರ್ ಅಲಿಯಾಸ್ ಇರಾಜ್ ಹಾಗೂ ಸದ್ಮಾನ್ ಯಾಸಿರ್ ಮಹ್ಮೂದ್ ಎಂಬಾತನಿಗೆ 3 ವರ್ಷ ಸೆರೆವಾಸ ಹಾಗೂ 2 ಸಾವಿರ ಟಾಕಾ ದಂಡ ವಿಧಿಸಲಾಗಿದೆಯೆಂದು ‘ಡೈಲಿ ಸ್ಟಾರ್’ ವರದಿ ಮಾಡಿದೆ.

ಈ ವಿದ್ಯಾರ್ಥಿಗಳು ‘ನಾಸ್ತಿಕ ಬ್ಲಾಗರ್’ನನ್ನು ಕೊಲ್ಲುವ ಪ್ರತಿಜ್ಞೆ ಮಾಡಿದ್ದರೆಂದು ತನಿಖಾಧಿಕಾರಿ ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ತಾಬಾಬಾಬಾ ಎಂಬ ಉಪನಾಮದಲ್ಲಿ ಬರೆಯುತ್ತಿದ್ದ ಬ್ಲಾಗ್ ಬರಹಗಳಿಗಾಗಿ ಅವರು ರಜೀಬ್‌ನನ್ನು ಗುರಿ ಮಾಡಿದ್ದರು ಹಾಗೂ ಎರಡು ಪ್ರತ್ಯೇಕ ಗುಂಪುಗಳನ್ನು ಅವರ ಹತ್ಯೆ ನಡೆಸಿದ್ದರು.

ನಿಷೇಧಿತ ಎಬಿಟಿ ಭಯೋತ್ಪಾದಕ ಸಂಘಟನೆಯ ನಾಯಕ ಮುಫ್ತಿ ಜಶೀಮುದ್ದೀನ್ ರಹ್ಮಾನಿ ಎಂಬಾತನಿಗೆ 5 ವರ್ಷ ಸೆರೆವಾಸ ಹಾಗೂ 2 ಸಾವಿರ ಟಾಕಾ ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಹೆಚ್ಚುವರಿ ಸಜೆ ವಿಧಿಸಲಾಗಿದೆ. ಶಹಬಾಗ್ ಚಳಿವಳಿಯ ಕಾರ್ಯಕರ್ತನಾಗಿದ್ದ ಹೈದರ್ ಎಂಬಾತನನ್ನು ಮೀರ್‌ಪುರದ ಆತನ ಮನೆಯ ಬಳಿ 2013ರ ಫೆ.15ರಂದು ಹೊಡೆದು ಕೊಲ್ಲಲಾಗಿತ್ತು. ಆತನ ಮೃತದೇಹವನ್ನು ಬರ್ಬರವಾಗಿ ಕೊಚ್ಚಿ ಹಾಕಲಾಗಿತ್ತು.
ಹೈದರ್, ಇದುವರೆಗೆ ಕೊಲ್ಲಲ್ಪಟ್ಟಿರುವ ಐವರು ಬ್ಲಾಗರ್‌ಗಳಲ್ಲಿ ಮೊದಲನೆಯವನಾಗಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News