ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದರೆ ಶಾರುಖ್ ಖಾನ್ ನಿವೃತ್ತಿ !
ನಾನು ರಾಷ್ಟ್ರೀಯ ಪ್ರಶಸ್ತಿಗಾಗಿ ಕಾಯುತ್ತಿದ್ದೇನೆ. ಅದು ಸಿಕ್ಕಿದ ಕೂಡಲೇ ನಟನೆಯಿಂದ ನಿವೃತ್ತಿಗೆ ನಿರ್ಧಾರ ಮಾಡಿದ್ದೇನೆ ! ಎಂದು ಹೇಳಿದ್ದಾರೆ ಕಿಂಗ್ ಖಾನ್ ಶಾರುಖ್ . ಮನೀಶ್ ಶರ್ಮ ನಿರ್ದೇಶನದ ತಮ್ಮ ಮುಂದಿನ ಚಿತ್ರ ಫ್ಯಾನ್ ನ ಟೀಸರ್ ಗೆ ವ್ಯಾಪಕ ಪ್ರಶಂಸೆ ವ್ಯಕ್ತ ವಾಗುತ್ತಿರುವಾಗ ಶಾರುಖ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಯಶ್ ರಾಜ್ ನಿರ್ಮಾಣದ ಫ್ಯಾನ್ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿದ್ದಾರೆ. ಸೂಪರ್ ಸ್ಟಾರ್ ಆರ್ಯನ್ ಹಾಗು ಆತನ ಕಟ್ಟಾ ಅಭಿಮಾನಿ ಹಾಗು ಆತನನ್ನು ಹೋಲುವ ೨೪ ರ ಹರೆಯದ ಗೌರವ್ ಆಗಿ ಶಾರುಖ್ ನಟಿಸಿದ್ದು ಚಿತ್ರದ ಮೊದಲ ಲುಕ್ ಗೆ ಎಲ್ಲೆಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ . ಇದೇ ಸಂದರ್ಭದಲ್ಲಿ ಫ್ಯಾನ್ ಚಿತ್ರದ ನಟನೆಗೆ ಎಲ್ಲ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಶಾರುಖ್ ನಿವೃತ್ತಿಯ ಉತ್ತರ ನೀಡಿ ಆಶ್ಚರ್ಯ ಮೂಡಿಸಿದ್ದಾರೆ. ೨೪ ರ ಹರೆಯದ ಗೌರವ್ ಆಗಲು ಪ್ರತಿದಿನ ತೀವ್ರ ಪ್ರಾಸ್ಥೆಟಿಕ್ ಮೇಕ್ ಅಪ್ ಮಾಡಿಸಿಕೊಂಡಿದ್ದ ಶಾರುಖ್ ಅದು ತುಂಬಾ ಸವಾಲಿನದ್ದಾಗಿತ್ತು ಹಾಗು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.
ಈಗಾಗಲೇ ಹಲವಾರು ಫಿಲಂ ಫೇರ್ ಹಾಗು ಇತರ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿರುವ ಶಾರುಖ್ ಈವರೆಗೆ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿಲ್ಲ.