ಸುಳ್ಯ: ವರ್ಷಾಂತ್ಯದಲ್ಲಿ ಮೂವರ ದುರಂತ ಅಂತ್ಯ; ನೀರುಪಾಲಾಗಿದ್ದ ವಿದ್ಯಾರ್ಥಿಗಳಿಬ್ಬರ ಮೃತದೇಹ ಪತ್ತೆ; ಮರ್ಕಂಜದಲ್ಲಿ ಕೆ

Update: 2016-01-01 18:32 GMT

ಸುಳ್ಯ, ಜ.1: ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಮೀಪವಿರುವ ದೇವರಗುಂಡಿ ಜಲಪಾತಕ್ಕೆ ಬಿದ್ದು ನೀರುಪಾಲಾದ ಸುಳ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಬ್ಬರ ಮೃತದೇಹ ಪತ್ತೆಯಾಗಿದೆ.
ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ 3ನೆ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿ, ಆಂಧ್ರಪ್ರದೇಶದ ಹೈದರಾಬಾದ್‌ನ ಸುಧೀರ್ ಮತ್ತು ಮೆಡಿಕಲ್ ಕಾಲೇಜಿನ 2ನೆ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ಬೆಂಗಳೂರಿನ ಆಶಿಷ್ ಮೃತಪಟ್ಟವರು.
ಕೆ.ವಿ.ಜಿ. ಮೆಡಿಕಲ್ ಕಾಲೇಜಿನ 9 ವಿದ್ಯಾರ್ಥಿಗಳ ತಂಡ ಆಶಿಷ್‌ನ ಹುಟ್ಟುಹಬ್ಬದ ಸಂಭ್ರಮಾಚರಣೆ ಅಂಗವಾಗಿ ದೇವರಗುಂಡಿ ಜಲಪಾತಕ್ಕೆ ತೆರಳಿದ್ದರು. ದೇವರಗುಂಡಿಯಲ್ಲಿ ಆಶಿಷ್ ಮತ್ತು ಸುಧೀರ್ ನೀರಿಗೆ ಇಳಿದಾಗ ಸುಧೀರ್ ನೀರಿನ ಸೆಳೆತಕ್ಕೆ ಸಿಲುಕಿದರು. ಅವರನ್ನು ರಕ್ಷಿಸಲು ಹೋದ ಆಶಿಷ್ ಕೂಡಾ ಸುಧೀರ್ ಜೊತೆ ನೀರಿನ ಸುಳಿಗೆ ಸಿಲುಕಿ ಮೃತಪಟ್ಟರು.

ಜೊತೆಗಿದ್ದ ವಿದ್ಯಾರ್ಥಿಗಳು ಅವರನ್ನು ರಕ್ಷಿಸಲು ಮುಂದಾದಾಗ ಸುಧೀರ್ ಮತ್ತು ಆಶಿಷ್ ನೀರಿನಲ್ಲಿ ಮುಳುಗಿ ಹೋಗಿದ್ದರು. ಬಳಿಕ ಜೊತೆಗಿದ್ದವರು ಕೂಡಲೇ ತೋಡಿಕಾನ ದೇವಸ್ಥಾನಕ್ಕೆ ಬಂದು ವಿಷಯ ತಿಳಿಸಿದರು. ದೇವಸ್ಥಾನದವರು ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರಿಗೆ ಕರೆ ಮಾಡಿ ಬರಮಾಡಿಕೊಂಡರು. ರಾತ್ರಿ 7:30ರ ವೇಳೆಗೆ ಇಬ್ಬರ ಮೃತದೇಹಗಳನ್ನೂ ಮೇಲಕ್ಕೆತ್ತಲಾಯಿತು. ದೇವರಗುಂಡಿ ಜಲಪಾತವಿರುವ ಸ್ಥಳ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಭಾಗಮಂಡಲ ಪೊಲೀಸರು ಬಂದು ಸುಳ್ಯ ಮತ್ತು ಸಂಪಾಜೆ ಪೊಲೀಸರ ಸಹಕಾರದೊಂದಿಗೆ ಮಹಜರು ನಡೆಸಿ ಬಳಿಕ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳ ಮನೆಯವರು ಆಗಮಿಸಿ ಮೃತದೇಹಗಳನ್ನು ತಮ್ಮೂರಿಗೆ ಕೊಂಡೊಯ್ದಿದ್ದಾರೆ.
ಕೆರೆಗೆ ಬಿದ್ದು ಮೃತ್ಯು: ಮತ್ತೊಂದು ಪ್ರಕರಣದಲ್ಲಿ ಮರ್ಕಂಜ ಗ್ರಾಪಂ ಮಾಜಿ ಅಧ್ಯಕ್ಷೆ ಹರಿಣಾಕ್ಷಿಯ ಪತಿ ಸಂಕೇಶ ವಿಠಲ ಪುರುಷ ಎಂಬವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ವಿಠಲರು ಅಪರಾಹ್ನ ತಮ್ಮ ಜಾಗದಲ್ಲಿರುವ ಕೆರೆಗೆ ಆಕಸ್ಮಿಕವಾಗಿ ಜಾರಿ ಬಿದ್ದರೆನ್ನಲಾಗಿದೆ. ರಾತ್ರಿಯ ವೇಳೆಗೆ ಅವರ ಮೃತದೇಹ ಪತ್ತೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News