ಪರ್ಯಾಯ: ಸರಕಾರದಿಂದ 2 ಕೋ. ವೆಚ್ಚದ ಕಾಮಗಾರಿ

Update: 2016-01-01 18:33 GMT

ಪರ್ಯಾಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪ್ರಮೋದ್

  ಉಡುಪಿ, ಜ.1: ಪೇಜಾವರ ಪರ್ಯಾಯ ಮಹೋತ್ಸವದ ಪ್ರಯುಕ್ತ ರಾಜ್ಯ ಸರಕಾರ, ಉಡುಪಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ನಗರದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಪರ್ಯಾಯಕ್ಕೆ ಮುನ್ನ ಈ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಪೇಜಾವರ ಸ್ವಾಮೀಜಿಯ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ಪೇಜಾವರ ಪರ್ಯಾಯಕ್ಕೆ ಒಟ್ಟು 3.20 ಕೋಟಿ ರೂ. ಬಜೆಟ್ ಸಿದ್ಧಪಡಿಸಲಾಗಿದ್ದು, ಅದರಲ್ಲಿ ವಿವಿಧ ಮೂಲಗಳಿಂದ ಈಗಾಗಲೇ 50 ಲಕ್ಷ ರೂ. ಸಂಗ್ರಹವಾಗಿದೆ. ಸುಮಾರು 1.5 ಕೋಟಿ ರೂ. ನೀಡುವ ಆಶ್ವಾಸನೆ ದೊರೆತಿದೆ. ಇನ್ನು 1 ಕೋಟಿ ರೂ. ಕೊರತೆ ಇದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 60 ಲಕ್ಷ ರೂ. ದೊರೆಯುವ ನಿರೀಕ್ಷೆ ಇದೆ ಎಂದರು.

 ದರ್ಬಾರ್‌ನ್ನು 7,000 ಮಂದಿ ಕುಳಿತು ವೀಕ್ಷಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪರ್ಯಾಯಕ್ಕೆ ಆಗಮಿಸುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು 286 ಹೊಟೇಲು, 35 ಫ್ಲಾಟ್, 21 ಮನೆಗಳನ್ನು ಗುರುತಿಸಲಾಗಿದೆ ಎಂದು ಕೇಶವರಾಯ ಪ್ರಭು ಮಾಹಿತಿ ನೀಡಿದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಶಂಕರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಹೊರೆಕಾಣಿಕೆಯ ಕುರಿತು ಯಶ್ಪಾಲ್ ಸುವರ್ಣ, ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಪ್ರೊ.ಎಂ.ಎಲ್. ಸಾಮಗ ಸಭೆಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಯುವರಾಜ್, ಪೌರಾಯುಕ್ತ ಡಿ.ಮಂಜು ನಾಥಯ್ಯ, ಮಠದ ದಿವಾನ ರಘುರಾಮ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ನಾಗರಾಜ್ ಶೆಟ್ಟಿ, ಭುವನೇಂದ್ರ ಕಿದಿಯೂರು, ಹರಿಕೃಷ್ಣ ಪುನರೂರು, ಎಂ.ಬಿ.ಪುರಾಣಿಕ್, ಪ್ರದೀಪ್‌ಕುಮಾರ್ ಕಲ್ಕೂರ, ಆನಂದ್ ಸಿ.ಕುಂದರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಭಾಸ್ಕರ್ ರಾವ್, ಗುರ್ಮೆ ಸುರೇಶ್ ಶೆಟ್ಟಿ, ಮಂಜುನಾಥ ಉಪಾಧ್ಯಾಯ, ಅಣ್ಣಪ್ಪ ಹೆಗ್ಡೆ ಮೊದ ಲಾದವರು ಉಪಸ್ಥಿತರಿದ್ದರು.

ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಪ್ರೊ.ಹೇರಂಜೆ ಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News