ಬ್ರಿಟನ್‌ನಿಂದ ಭಾರತಕ್ಕೆ ಆರ್ಥಿಕ ನೆರವು ಸ್ಥಗಿತ

Update: 2016-01-01 18:37 GMT

ಲಂಡನ್, ಜ.1: ಭಾರತಕ್ಕೆ ಕಳುಹಿಸುತ್ತಿದ್ದ ಮಿಲಿಯಾಂತರ ಪೌಂಡ್ ಆರ್ಥಿಕ ನೆರವನ್ನು ಬ್ರಿಟನ್ ಸರಕಾರ ಶುಕ್ರವಾರದಿಂದ ಸ್ಥಗಿತಗೊಳಿಸಿದೆ.
ಬ್ರಿಟನ್‌ನಲ್ಲಿ ಭಾರತೀಯ ಸಮುದಾಯವಿರುವ ಕೆಲವು ಪ್ರಾಂತಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಗೊಂಡಿದೆಯಾದರೂ, ಈ ವರ್ಷದ ಮೊದಲ ದಿನದಿಂದಲೇ ಡೇವಿಡ್ ಕ್ಯಾಮರೂನ್ ಸರಕಾರವು ತನ್ನ ನಿರ್ಣಯವನ್ನು ಜಾರಿಗೊಳಿಸಿದೆ ಎಂದು ಗುರುವಾರ ಬ್ರಿಟಿಷ್ ಸರಕಾರ ಹೊರಡಿಸಿರುವ ಹೇಳಿಕೆ ತಿಳಿಸಿದೆ.
 ಭಾರತ ಕಳೆದ ಹಲವು ದಶಕಗಳಲ್ಲಿ ಪ್ರಗತಿ ಸಾಧಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ, ಬಾಹ್ಯಾಕಾಶ ಸಂಶೋಧನೆಗೆ ಭಾರೀ ಹಣ ವ್ಯಯಿಸುತ್ತಿದೆ. ಜಗತ್ತಿನ ಅತಿ ಶ್ರೀಮಂತರು ಭಾರತದಲ್ಲಿದ್ದಾರೆ. ಹೀಗಿರುವಾಗ ಆ ರಾಷ್ಟ್ರಕ್ಕೆ ಆರ್ಥಿಕ ನೆರವು ನೀಡುವುದು ಸರಿಯಲ್ಲ ಎಂದು 2012ರಲ್ಲೇ ಬ್ರಿಟನ್‌ನಲ್ಲಿ ವಿರೋಧ ವ್ಯಕ್ತಗೊಂಡಿತ್ತು.

‘‘ಈ ಹಿಂದೆ ಭಾರತಕ್ಕೆ ಪ್ರಕಟಿಸಲಾಗಿದ್ದ ಆರ್ಥಿಕ ನೆರವು ಹಾಗೂ ತಾಂತ್ರಿಕ ಸಹಕಾರವನ್ನು ಮೂರು ವರ್ಷಗಳಲ್ಲಿ ಬ್ರಿಟನ್ ಪೂರ್ಣಗೊಳಿಸಿದೆ. ಜಾರಿಯಲ್ಲಿದ್ದ ಯೋಜನೆಗಳು, ಆರ್ಥಿಕ ಸಹಕಾರವನ್ನು ಪೂರ್ಣಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ಈಗ ಮುಕ್ತಾಯಗೊಂಡಿದೆ. ಅದರನ್ವಯ ಭಾರತಕ್ಕೆ ಆರ್ಥಿಕ ನೆರವು ನಿಲ್ಲಿಸಲಾಗಿದೆ. ಆದರೆ ಖಾಸಗಿ ಕ್ಷೇತ್ರದ ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿ ಕೌಶಲ ವಿನಿಮಯ, ಹೂಡಿಕೆ ಈ ಮೊದಲಿನಂತೆಯೇ ಮುಂದುವರಿಯಲಿವೆ’’ ಎಂದು ಬ್ರಿಟನ್ ಸಂಸತ್ ಪ್ರಕಟಿಸಿದೆ.
 ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘‘ಭಾರತದ ಆರ್ಥಿಕ ಶಕ್ತಿಯನ್ನು ಬ್ರಿಟನ್ ಕೊನೆಗಾದರೂ ಗುರುತಿಸಿದೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News