×
Ad

ಉಡುಪಿ: ಗೃಹರಕ್ಷಕ ದಳದಿಂದ ವಲಯ ಮಟ್ಟದ ಕ್ರೀಡಾಕೂಟ

Update: 2016-01-02 00:08 IST

ಉಡುಪಿ, ಜ.1: ಉಡುಪಿ ಜಿಲ್ಲಾ ಗೃಹ ರಕ್ಷಕದಳದ ಆಶ್ರಯದಲ್ಲಿ ನಾಲ್ಕು ಜಿಲ್ಲೆಗಳನ್ನೊಳಗೊಂಡ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಜ.4ರಿಂದ 6ರವರೆಗೆ ಮಣಿಪಾಲದ ಎಂಐಟಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಹೇಳಿದ್ದಾರೆ.

ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗೃಹರಕ್ಷಕ ದಳದ 140ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಗೃಹರಕ್ಷಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ಸ್ಪರ್ಧಿಗಳು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯಲಿದ್ದಾರೆ ಎಂದವರು ಹೇಳಿದರು.

ಕ್ರೀಡಾಕೂಟವನ್ನು ಜ.4ರಂದು ಸಂಜೆ 4ಕ್ಕೆ ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಉಡುಪಿ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ.ಕೆ. ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭ ಜ.6ರ ಸಂಜೆ 4ಕ್ಕೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಸಮಾರೋಪ ಭಾಷಣ ಹಾಗೂ ಬಹುಮಾನ ವಿತರಣೆ ಮಾಡುವರು. ಅಧ್ಯಕ್ಷತೆಯನ್ನು ಡಾ.ಕೆ. ಪ್ರಶಾಂತ್ ಶೆಟ್ಟಿ ವಹಿಸುವರು ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News