ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ: ಸಚಿವ ಡಿವಿ

Update: 2016-01-01 18:42 GMT

ಪುತ್ತೂರು, ಜ.1: ಎತ್ತಿನಹೊಳೆ ಯೋಜನೆಯು ಪಶ್ಚಿಮ ಘಟ್ಟದ ತುತ್ತ ತುದಿಯಲ್ಲಿರುವ 3-4 ಸಣ್ಣ ತೊರೆಗಳ ನೀರನ್ನು ಮಳೆಗಾಲದ 100 ದಿನಗಳಲ್ಲಿ ಮಾತ್ರ ಬಯಲು ಸೀಮೆಗೆ ನೀರು ಒಯ್ಯುವ ಯೋಜನೆಯಾಗಿದೆ. ಆದರೆ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಗೊಂದಲ ಮತ್ತು ಆತಂಕವಿದೆ. ಸ್ವಯಂ ಘೋಷಿತ ಪರಿಸರವಾದಿಗಳು ಜಿಲ್ಲೆಯ ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳುತ್ತಿದ್ದಾರೆ. ಯೋಜನೆಯ ಬಗ್ಗೆ ಜನತೆಗೆ ಗೊಂದಲ ಬೇಡ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಶುಕ್ರವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ದೇವಳದ ರಥಬೀದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕುಡಿಯುವ ನೀರಿನ ಯೋಜನೆಗೆ ಯಾರೂ ವಿರೋಧ ಮಾಡುವುದು ಸರಿಯಲ್ಲ. ಕಳಸಾ ಬಂಡೂರಿ ಯೋಜನೆಗಾಗಿ ರಾಜ್ಯದ ಜನತೆ ಹೋರಾಟ ನಡೆಸುತ್ತಿದ್ದರೆ ಗೋವಾದವರು ವಿರೋಧಿಸುತ್ತಿದ್ದಾರೆ. ಈ ವಿಚಾರದಲ್ಲಿ ಗೋವಾದ ವಾದವನ್ನು ವಿರೋಧಿಸುವ ನಾವು ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಎತ್ತಿನಹೊಳೆ ಯೋಜನೆಯ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ನೀಡಿ ಗೊಂದಲವನ್ನು ನಿವಾರಿ ಸಲು ಮುಂದಾಗಬೇಕು. ಇದು ರಾಜ್ಯದ ಯೋಜನೆ ಯಾಗಿದ್ದು, ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ಪಡೆಯುವುದು ಸಹಜ ಪ್ರಕ್ರಿಯೆ ಎಂದರು. ಬಿಜೆಪಿ ನಿರೀಕ್ಷೆ ಹುಸಿಯಾಯಿತು:  ವಿಧಾನ ಪರಿಷತ್ ಚುನಾವಣೆಯಲ್ಲಿ 12ರಿಂದ 15 ಸ್ಥಾನಗಳನ್ನು ನಮ್ಮ ಪಕ್ಷ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು. ನಿರೀಕ್ಷಿತ ಸ್ಥಾನ ಪಡೆಯಲು ನಮ್ಮಿಂದ ಆಗಲಿಲ್ಲ ಎಂದು ಡಿ.ವಿ. ಸದಾನಂದ ಗೌಡ ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಟಂದೂರು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಸಾಜ ರಾಧಾಕೃಷ್ಣ ಆಳ್ವ, ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಉದ್ಯಮಿ ಅಶೋಕ್‌ಕುಮಾರ್ ರೈ ಕೋಡಿಂಬಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗ ಇತ್ತೀಚೆಗೆ ದಿಲ್ಲಿಯಲ್ಲಿ ಕೇಂದ್ರ ಪರಿಸರ ಖಾತೆ ಸಚಿವರನ್ನು ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರನ್ನು ಭೇಟಿಯಾಗಿ ಎತ್ತಿನಹೊಳೆ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿರುವ ಬಗ್ಗೆ ಸಚಿವ ಡಿ.ವಿ. ಸದಾನಂದ ಗೌಡರನ್ನು ಪತ್ರಕರ್ತರು ಗಮನ ಸೆಳೆದಾಗ, ‘ನನಗೆ ಇದರ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ನಾನು ಏನೂ ಹೇಳಲಾರೆ. ನಿಯೋಗ ಹೋದ ವಿಚಾರ ಇವತ್ತು ನಿಮ್ಮ ಮೂಲಕವೇ ಗೊತ್ತಾಗಿರುವುದು’ ಎಂದರು.
ದ.ಕ. ಜಿಲ್ಲಾ ಬಿಜೆಪಿಯ ಯಾವ ನಾಯಕರೂ ನಿಮ್ಮನ್ನು ಈ ಬಗ್ಗೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿವಿ, ಕನಿಷ್ಠ ನನಗೆ ತಿಳಿಸುವ ಸೌಜನ್ಯ ಕೂಡ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News