ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆ: ಸಾಲ-ಠೇವಣಿಯ ಅನುಪಾತ ಶೇ.50.37ಕ್ಕೆ ಹೆಚ್ಚಳ

Update: 2016-01-01 18:42 GMT

ಮಣಿಪಾಲ, ಜ.1: ಜಿಲ್ಲೆಯ ಬ್ಯಾಂಕ್‌ಗಳು ಸೆಪ್ಟಂಬರ್ ತಿಂಗಳ ಅಂತ್ಯಕ್ಕೆ 16,978 ಕೋಟಿ ರೂ. ಠೇವಣಿಯನ್ನು ಹಾಗೂ 8,552 ಕೋಟಿ ರೂ. ಮುಂಗಡವನ್ನು ಹೊಂದಿದ್ದು, ವಾರ್ಷಿಕವಾಗಿ ಠೇವಣಿಯಲ್ಲಿ ಶೇ.13.68 ಹಾಗೂ ಮುಂಗಡದಲ್ಲಿ ಶೇ.11.22ರ ಪ್ರಗತಿಯನ್ನು ಸಾಧಿಸಿದೆ. ಇದರೊಂದಿಗೆ ಸಾಲ ಠೇವಣಿಯ ಅನುಪಾತವು ಸೆ.ತಿಂಗಳ ಕೊನೆಗೆ ಶೇ.4.97ರಿಂದ ಶೇ.50.37ಕ್ಕೆ ಹೆಚ್ಚಳ ಸಾಧಿಸಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ಉಡುಪಿ ವಿಭಾಗೀಯ ಕಚೇರಿಯ ಸಹಾಯಕ ಮಹಾಪ್ರಬಂಧಕ ಪಿ.ಪಳಿನಿಸ್ವಾಮಿ ಹೇಳಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಮಿತಿಯ ಸಭೆಯಲ್ಲಿ ಸೆ.ತಿಂಗಳ ಅಂತ್ಯಕ್ಕೆ ಬ್ಯಾಂಕ್‌ಗಳ ಪ್ರಗತಿಯ ಅಂಕಿಅಂಶಗಳನ್ನು ಪ್ರಸ್ತುತಪಡಿಸಿ ಅವರು ಈ ವಿಷಯ ತಿಳಿಸಿದರು.

ಬ್ಯಾಂಕ್‌ಗಳು ಜಿಲ್ಲೆಯ ದುರ್ಬಲ ವರ್ಗದ 1,18,729 ಜನರಿಗೆ 1,227 ಕೋಟಿ ರೂ. ಸಾಲ ನೀಡಿವೆ. ಈ ಪೈಕಿ ಪ.ಜಾತಿ ಮತ್ತು ಪಂಗಡದ 19,605 ಮಂದಿ ಫಲಾನುಭವಿಗಳಿಗೆ 137 ಕೋಟಿ ರೂ., ಅಲ್ಪಸಂಖ್ಯಾತರ ವರ್ಗದ 44,238 ಮಂದಿಗೆ 933 ಕೋಟಿ ರೂ.ಸಾಲವನ್ನು ವಿತರಿಸಲಾಗಿದೆ.

1,20,460 ಮಹಿಳೆಯರಿಗೆ ನೀಡಿದ ಸಾಲದ ಮೊತ್ತ 1,660 ಕೋಟಿ ರೂ. ಆಗಿದೆ. ಅಲ್ಲದೇ 15,716 ವಿದ್ಯಾರ್ಥಿಗಳಿಗೆ 328.75 ಕೋಟಿ ರೂ. ವಿದ್ಯಾಭ್ಯಾಸ ಸಾಲವನ್ನು ನೀಡಲಾಗಿದೆ. ಇದರಲ್ಲಿ ಈ ವರ್ಷ 298 ವಿದ್ಯಾರ್ಥಿಗಳಿಗೆ ನೀಡಿದ 47.18 ಕೋಟಿ ರೂ.ಸಾಲವೂ ಸೇರಿದೆ ಎಂದರು.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿತ್ತೀಯ ಸೇರ್ಪಡೆ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಬ್ಯಾಂಕ್‌ಗಳ ಉಪಸೇವಾ ಕ್ಷೇತ್ರದನ್ವಯ ಎಲ್ಲಾ ಹಳ್ಳಿಗಳಿಗೂ ಬ್ಯಾಂಕ್‌ನ ಸೇವೆಯನ್ನು ಒದಗಿಸುತ್ತಿವೆ. ಅಲ್ಲದೇ 2,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಎಲ್ಲಾ ಹಳ್ಳಿಗಳಿಗೂ ಬ್ಯಾಂಕ್‌ನ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಜಿಲ್ಲೆಯ ಬ್ಯಾಂಕ್‌ಗಳು ಡಿ.20ರವರೆಗೆ ಪ್ರಧಾನಮಂತ್ರಿ ಸುರಕ್ಷಾ ವಿಮೆಯಲ್ಲಿ 2,24,740 ಗ್ರಾಹಕರನ್ನು, ಪ್ರಧಾನಮಂತ್ರಿ ಜೀವನಜ್ಯೋತಿ ವಿಮೆಯಡಿ 1,00,672 ಗ್ರಾಹಕರನ್ನು ಹಾಗೂ ಅಟಲ್ ಪಿಂಚಣಿ ಯೋಜನೆಯಡಿ 4,164 ಗ್ರಾಹಕರನ್ನು ನೋಂದಾಯಿಸಿಕೊಂಡಿವೆ ಎಂದು ಪಳಿನಿಸ್ವಾಮಿ ತಿಳಿಸಿದರು.
ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ.ವಿಶಾಲ್, ಉಡುಪಿ ಬ್ಯಾಂಕ್ ಖಾತೆ ಹಾಗೂ ಆಧಾರ್‌ಕಾರ್ಡ್ ನಂಬರ್‌ಗಳ ಜೋಡಣೆಯನ್ನು ಪರಿಶೀಲಿಸಿ ಮುಂದಿನ ಆರು ತಿಂಗಳೊಳಗೆ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಣೆಯಾಗಲು ಕಾರ್ಯಸೂಚಿಯನ್ನು ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕ ಪ್ರಸಾದ್ ರಾವ್, ರಿಸರ್ವ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಲಕ್ಷ್ಮೀಪತಿ ಉಪಸ್ಥಿತರಿದ್ದರು. ಅಗ್ರಣಿ ಜಿಲ್ಲಾ ಮುಖ್ಯ ಪ್ರಬಂಧಕ ಕೆ.ಸುಬ್ಬರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News