ಪಶ್ಚಿಮಬಂಗಾಳ ಚುನಾವಣಾ ಪ್ರಚಾರದಲ್ಲಿ ಮೋದಿಯನ್ನು ಅತಿಯಾಗಿ ಬಳಸದಿರಲು ನಿರ್ಧಾರ

Update: 2016-01-01 18:54 GMT

ಹೊಸದಿಲ್ಲಿ,ಜ.1: ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನಿಂದ ಪಾಠ ಕಲಿತಿರುವ ಬಿಜೆಪಿ, ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅತಿಯಾಗಿ ಬಳಸದಿರಲು ನಿರ್ಧರಿಸಿದೆ.
 ಪಕ್ಷದ ಪ್ರಮುಖ ಲಾಂಛನ ಮೋದಿಯವರ ಹೊರತಾಗಿ ಬಿಜೆಪಿಯ ಅಭಿಯಾನ ಪೂರ್ಣವಾಗದು ಪಶ್ಚಿಮಬಂಗಾಳದಲ್ಲಿ ಬಿಜೆಪಿ ಒಟ್ಟು 294 ಕ್ಷೇತ್ರಗಳಲ್ಲಿ ಹೆಚ್ಚಿನ ಕಡೆ ಸ್ಪರ್ಧಿಸಲಿದ್ದು, ರಚಿಸಲಾಗುತ್ತಿರುವ ಕಾರ್ಯವ್ಯೆಹದಂತೆ, ಪ್ರಧಾನಿ ಚುನಾವಣಾ ಪ್ರಚಾರದ ತರೀಯಾವಸ್ಥೆಯಲ್ಲಿ ಸೇರಿಕೊಳ್ಳಲಿದ್ದಾರೆ. ಅವರೊಂದಿಗೆ ಗೃಹಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೈಜೋಡಿಸಲಿದ್ದಾರೆಂದು ತಿಳಿದುಬಂದಿದೆ.


ಮೋದಿ ಅಲೆ ದೇಶಾದ್ಯಂತ ಬೀಸಿದ್ದ 2014ರ ಲೋಕಸಭಾ ಚುನಾವಣೆಯ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮತಗಳ ಪಾಲು ಶೇ. 6ರಿಂದ ಶೇ.17ಕ್ಕೆ ಏರಿತ್ತು. ಕೇವಲ ಹೆಜ್ಜೆ ಊರುವಷ್ಟೇ ಹಿಡಿತ ಹೊಂದಿರುವ ರಾಜ್ಯದಲ್ಲಿ ಪಕ್ಷವು ಇದುವರೆಗಿನ ಅತ್ಯುತ್ತಮ ಸಾಧನೆಯನ್ನು ಇನ್ನಷ್ಟು ಸುಧಾರಿಸುವುದಕ್ಕಷ್ಟೇ ತನ್ನ ಆಸೆಯನ್ನು ಸೀಮಿತಗೊಳಿಸಿದೆ. ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ನಾಲ್ಕು ಪ್ರಮುಖ ಅಂಶಗಳು ಬಿಜೆಪಿಯ ಅಭಿಯಾನದ ಪ್ರಧಾನ ವಿಷಯಗಳಾಗಿರುತ್ತವೆ. ಶಾರದಾ ಚಿಟ್ ಹಾಗೂ ಇತರ ಚಿಟ್‌ಫಂಡ್ ಹಗರಣಗಳು ಅಗತ್ಯವಾಗಿ ಆದ್ಯತೆ ಪಡೆಯಲಿವೆ. ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿರುವ ರಾಜಕೀಯ ಅಪರಾಧೀಕರಣ, ಮಹಿಳೆಯರ ಸುರಕ್ಷೆ ಹಾಗೂ ರಾಜ್ಯದ ಅಭಿವೃದ್ಧಿ ಹೀನತೆ ಇತರ ವಿಷಯಗಳಾಗಲಿವೆ. ಪಶ್ಚಿಮಬಂಗಾಳದಲ್ಲಿ ಬಿಂಬಿಸಬಹುದಾದ ಸ್ಥಳೀಯ ನಾಯಕರನ್ನು ಬಿಜೆಪಿ ಹೊಂದಿಲ್ಲ. ‘‘ನೀವು ಹೊಸ ಮುಖವೊಂದನ್ನು ಬಯಸಿದಿರಿ. ಮಮತಾ ಬ್ಯಾನರ್ಜಿಯವರನ್ನು ಮುಖ್ಯಮಂತ್ರಿಯಾಗಿ ಆರಿಸಿದಿರಿ. ಅವರು ಕೇವಲ ಎಡರಂಗದ 34 ವರ್ಷಗಳ ದುರಾಡಳಿತವನ್ನು 39 ವರ್ಷಗಳಿಗೆ ವಿಸ್ತರಿಸಿದರು. ಆದರೆ, ನಿಮಗೆ ಉತ್ತಮ ಆಡಳಿತ ಬೇಕೆಂದಿದ್ದರೆ, ರಾಜ್ಯಕ್ಕೆ ಅಭಿವೃದ್ಧಿಯನ್ನು ಒದಗಿಸಬಲ್ಲ ಸಂಯುಕ್ತ ನಾಯಕತ್ವವಿರುವ ಬಿಜೆಪಿಗೆ ಮತ ನೀಡಿರಿ’’ ಎಂದು ಮತದಾರರಿಗೆ ಮನವಿ ಮಾಡುವುದು ಬಿಜೆಪಿಯ ಕಾರ್ಯವ್ಯೆಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News