‘2030 ಸುಸ್ಥಿರ ಅಭಿವೃದ್ಧಿ ಗುರಿ’ ಯೋಜನೆಗೆ ಚಾಲನೆ

Update: 2016-01-01 19:01 GMT

ವಿಶ್ವಸಂಸ್ಥೆ, ಜ.1: ಮಹತ್ವಾಕಾಂಕ್ಷೆಯ ‘2030 ಸುಸ್ಥಿರ ಅಭಿವೃದ್ಧಿ ಗುರಿ’ ಯೋಜನೆಗೆ ವಿಶ್ವಸಂಸ್ಥೆ ಶುಕ್ರವಾರ ಚಾಲನೆ ನೀಡಿದೆ.
ಮುಂದಿನ 15 ವರ್ಷಗಳ ನಿಗದಿತ ಅವಧಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಬದುಕು ರೂಪಿಸುವುದನ್ನು ಖಾತರಿಪಡಿಸಲಿರುವ ಈ ಯೋಜನೆಯು ಬಡತನ ಹಾಗೂ ಹಸಿವು ನಿವಾರಿಸುವುದು ಮತ್ತು ಲಿಂಗ ಸಮಾನತೆಯನ್ನು ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ.
ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ)ಗಳ 15 ವರ್ಷಗಳ ಅವಧಿಯ ಯೋಜನೆಯು ಚಾಲನೆಗೊಳ್ಳುತ್ತಿರುವಂತೆಯೇ ಇದುವರೆಗೆ ಚಾಲ್ತಿಯಲ್ಲಿರುವ 15 ವರ್ಷಗಳ ಅವಧಿಯ ಬಡತನ ನಿರ್ಮೂಲನೆ ಸಹಸ್ರಮಾನದ ಅಭಿವೃದ್ಧಿ ಗುರಿ(ಎಂಡಿಜಿ)ಗಳು ಅಭಿಯಾನ ಮುಕ್ತಾಯಗೊಂಡಿದೆ.
 ಸುಸ್ಥಿರ ಅಭಿವೃದ್ಧಿ ಗುರಿಗಳ ಯಶಸ್ಸಿನಲ್ಲಿ ಭಾರತದ ಪಾತ್ರವು ನಿರ್ಣಾಯಕವಾಗಿ ಕಂಡು ಬಂದಿದೆ. ಅಂದಾಜು 1.4 ಶತಕೋಟಿ ಭಾರತೀಯ ಜೀವನಮಟ್ಟ ಸುಧಾರಣೆಯು ಮಾನವ ಕುಲದ ಒಟ್ಟು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗಿದೆ.
 ಕೇಂದ್ರ ಸರಕಾರದ ಉಪಕ್ರಮಗಳನ್ನು ಚಾಲನೆಗೊಳಿಸುವ ಮೂಲಕ ತಾನು ಈಗಾಗಲೇ ನೂತನ ಗುರಿಗಳನ್ನು ಅನುಷ್ಠಾನಗೊಳಿಸಿರುವುದಾಗಿ ಎಸ್‌ಡಿಜಿ ಜಾರಿಗೊಳ್ಳುವ ಮುನ್ನವೇ ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ.
ಭಾರತ ಸರಕಾರದ ‘ಮೇಕ್ ಇನ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ‘ಸ್ಮಾರ್ಟ್ ಸಿಟೀಸ್’ ಹಾಗೂ ‘ಸ್ಕಿಲ್ಸ್ ಇಂಡಿಯಾ’ ಮೊದಲಾದ ಮಹತ್ವಾಕಾಂಕ್ಷಿ ಯೋಜನೆಗಳ ಉದ್ದೇಶ ಆರ್ಥಿಕ ಅಭಿವೃದ್ಧಿ, ದೇಶೀಯ ಉತ್ಪಾದನೆ ಹಾಗೂ ಲಕ್ಷಾಂತರ ಮಂದಿಯನ್ನು ಬಡತನದಿಂದ ಮೇಲೆತ್ತುವುದಾಗಿದೆ ಎಂದು ಭಾರತ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News