ಪಠಾಣ್‌ಕೋಟ್‌ ವಾಯುನೆಲೆ ಮೇಲೆ ಉಗ್ರರ ದಾಳಿ; ಗುಂಡಿನ ಚಕಮಕಿ; 5 ಉಗ್ರರು ಬಲಿ; 4 ಯೋಧರು ಹುತಾತ್ಮ

Update: 2016-01-02 12:54 GMT

ಪಂಜಾಬ್‌, ಜ.2: ಪಂಜಾಬ್‌ನ ಪಠಾಣ್‌ಕೋಟ್‌ ವಾಯುಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಸಾವಿಗೀಡಾಗಿದ್ಧಾರೆ. ಭಾರತೀಯ ನಾಲ್ವರು ಐಎಎಫ್‌ ಯೋಧರು ಹುತಾತ್ಮರಾಗಿದ್ದಾರೆ.
ಇಂದು ಮುಂಜಾನೆ ಉಗ್ರರು ಏರ್‌ಬೇಸ್‌ಗೆ ನುಗ್ಗಿದಾಗ ಅವರನ್ನು ಸದೆ ಬಡಿಯಲು ,ಎನ್‌ಎಸ್‌ಜಿ ಕಮಾಂಡೊಗಳು ದಾಳಿ ನಡೆಸಿದರು. ಆಗ ಉಂಟಾದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಸತ್ತರು. ನಾಲ್ವರು ಯೋಧರು ಹುತಾತ್ಮರಾದರು. 6 ಮಂದಿ ಯೋಧರಿಗೆ ಗಾಯವಾಗಿದೆ. ಹೊಸವರ್ಷದ ಮೊದಲ ದಿನವೇ ದಾಳಿ ನಡೆಸಲು ಸಿದ್ದತೆ ನಡೆಸಿದ್ದ ಉಗ್ರರು ಇಂದು ನಡೆಸಿದರು.  ಉಗ್ರರು ಜೈ-ಶಿ ಮೊಹಮ್ಮದ್ ಉಗ್ರರ ಸಂಘಟನೆಗೆ ಸೇರಿದ್ದವರಾಗಿದ್ದು,  ದಾಳಿಯ ಹಿಂದೆ ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾ ಕೈವಾಡವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.   ಉಗ್ರರು ಸೇನಾ ಸಮವಸ್ತ್ರದಲ್ಲೇ ವಾಯುನೆಲೆ ಪ್ರವೇಶಿಸಿದ್ದರೆಂದು ಗೊತ್ತಾಗಿದೆ.
ಪಂಜಾಬ್‌ನಾದ್ಯಂತ ಹೈ ಅಲರ್ಟ್‌
ಪಠಾಣ್‌ ಕೋಟ್‌ ವಾಯುಸೇನಾ ನೆಲೆಯ ಮೇಲೆ  ಉಗ್ರರ ದಾಳಿಯ ಬಳಿಕ ಪಂಜಾಬ್‌ ರಾಜ್ಯಾದ್ಯಂತ ಹೈ ಅಲರ್ಟ್‌  ಘೋಷಿಸಲಾಗಿದೆ.
ಉಗ್ರರನ್ನು ಸದೆ ಬಡಿಯಲು ರಾಷ್ಟ್ರೀಯ ಭದ್ರತಾ ಪಡೆಯ 50 ಮಂದಿ ಕಮಾಂಡೊಗಳು ಕಾಯಾಚರಣೆ ನಡೆಸುತ್ತಿದ್ದಾರೆ
ವಾಯುನೆಲೆ ಪ್ರವೇಶಿಸಿದ್ದ  ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು,   ಉಳಿದ ಉಗ್ರರು  ವಾಯುನೆಲೆಯ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದಾರೆ.  ಉಗ್ರರು ಸೇನಾ ಸಮವಸ್ತ್ರ ಧರಿಸಿರುವುದಾಗಿ ಗೊತ್ತಾಗಿದೆ.
ಇಂದು ಬೆಳಿಗ್ಗೆ 4.30ರ ಸುಮಾರಿಗೆ ಏಕಾಏಕಿ ಉಗ್ರರ ಗುಂಪು ಸೇನಾ ವಾಯುನೆಲೆ ಗುಂಡಿನ ದಾಳಿ ನಡೆಸಿದ್ದಾರೆ.
ಉಗ್ರರ ಮಾಸ್ಟರ್ ಪ್ಲಾನ್: ಉಗ್ರರು ದಾಳಿ ನಡೆಸುವ ಮೊದಲು ಪಾಕಿಸ್ತಾನದಲ್ಲಿರುವ ತಮ್ಮ ಸಹಚರರ ಜೊತೆ ಮಾತುಕತೆ ನಡೆಸಿರುವುದನ್ನು ಗುಪ್ತಚರ ಇಲಾಖೆ ಪತ್ತೆ ಮಾಡಿತ್ತು.

ನಾಲ್ವರು ಉಗ್ರರು ರಾತ್ರಿ 12:35ರಿಂದ 1:40 ಅವಧಿಯಲ್ಲಿ ಕರೆ ಮಾಡಿ ಭಾರತದ ವಾಯುನೆಲೆ ಮತ್ತು ಫೈಟರ್ ಜೆಟ್‌ನ್ನು ಸ್ಪೋಟಿಸುವ ಮಾತುಕತೆ ನಡೆಸಿದ್ದರು. ಗುರುದಾಸ್‌ಪುರ ಎಸ್‌ಪಿಯ ವಾಹನ ಅಪಹರಿಸಿ ಉಗ್ರರು 1.30ರ ಹೊತ್ತಿಗೆ ಸೇನಾ ಸಮವಸ್ತ್ರ ಧರಿಸಿ ವಾಯುನೆಲೆ ಪ್ರವೇಶಿಸಿದ್ದರು.

ಯೋಧರು ತಕ್ಕ ಉತ್ತರ ಕೊಟ್ಟಿದ್ದಾರೆ: ರಾಜನಾಥ್ ಸಿಂಗ್
ಪಂಜಾಬ್‌ನ ವಾಯುನಲೆಯ ಮೇಲೆ ಉಗ್ರರ ದಾಳಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಖಾತೆ ಸಚಿವ ರಾಜನಾಥ್ ಸಿಂಗ್ ಇಂಥ ದಾಳಿಗೆ ನಾವು ಬೆದರುವುದಿಲ್ಲ. ಯೋಧರು ತಕ್ಕ ಉತ್ತರ ಕೊಟ್ಟಿದ್ದಾರೆ. ಭಾರತೀಯ ಸೇನೆಯ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜೀ ಇಲ್ಲ ಎಂದು  ಹೇಳಿದರು.
 ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವನ್ನು ಭಾರತ ಮುಂದುವರಿಸಲು ಬಯಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News