ಅಮೆರಿಕದಿಂದ ಶೇ 50 ʼಸುಂಕʼಷ್ಟ; ರತ್ನಾಭರಣ ರಫ್ತಿನ ಮೇಲೆ ತೀವ್ರ ಪರಿಣಾಮ
Photo Credit : Meta AI
ಅಮೆರಿಕ ಶೇ 50ರಷ್ಟು ಸುಂಕ ಹೇರಿದ ನಂತರ ರತ್ನಾಭರಣಗಳ ಉದ್ಯಮ ಮತ್ತು ಸಿದ್ಧ ಉಡುಪುಗಳ ಉದ್ಯಮಕ್ಕೆ ನೇರ ಹೊಡೆತ ಬಿದ್ದಿದೆ.
ಅಮೆರಿಕ ಶೇ 50ರಷ್ಟು ಸುಂಕ ಹೇರಿದ ನಂತರ ಅಮೆರಿಕಕ್ಕೆ ರಫ್ತು ಮಾಡುವ ವಿಭಾಗಗಳಲ್ಲಿ ರತ್ನಗಳು ಮತ್ತು ಆಭರಣಗಳಿಗೆ ಅತಿ ದೊಡ್ಡ ನಷ್ಟ ಸಂಭವಿಸಿದೆ. ಶೇ 70ರಷ್ಟು ರಫ್ತು ನಿಂತುಹೋಗಿದೆ. ಏಪ್ರಿಲ್ ಮತ್ತು ಆಗಸ್ಟ್ ನಡುವೆ ರತ್ನಾಭರಣಗಳ ರಫ್ತು ಶೇ 34ರಷ್ಟು ಕುಸಿದಿತ್ತು. ನಂತರ ಸೆಪ್ಟೆಂಬರ್ ನಲ್ಲಿ ಶೇ 70ರಷ್ಟು ಕುಸಿದಿದೆ.
ಅಕ್ಟೋಬರ್ ತಿಂಗಳಲ್ಲಿ ಭಾರತದ ರತ್ನ ಹಾಗೂ ಆಭರಣಗಳ ರಫ್ತು ಮೌಲ್ಯವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 30.57ರಷ್ಟು ಕಡಿಮೆಯಾಗಿದ್ದು, 19,172 ಕೋಟಿ ರೂ.ತಲುಪಿದೆ. ಹಿಂದಿನ ವರ್ಷದ ಅಕ್ಟೋಬರ್ ನಲ್ಲಿ ಈ ವಲಯದ ಒಟ್ಟು ರಫ್ತು ಮೌಲ್ಯವು 26237 ಕೋಟಿ ರೂ. ಆಗಿತ್ತು. ಚಿನ್ನ ಹಾಗೂ ಬೆಳ್ಳೆ ಬೆಲೆಯ ಚಂಚಲತೆಯೂ ರಫ್ತು ಕುಸಿತಕ್ಕೆ ಒಂದು ಕಾರಣವಾಗಿದೆ.
ಕೇರ್‌ಎಡ್ಜ್ ದತ್ತಾಂಶ ತೋರಿಸಿರುವ ಪ್ರಕಾರ ಶೇ 50ರಷ್ಟು ಸುಂಕ ಹೇರಿದ ಬಳಿಕ ರತ್ನಾಭರಣಗಳ ಉದ್ಯಮದಲ್ಲಿ ಶೇ 69.7ರಷ್ಟು ರಫ್ತು ಕುಸಿತಗೊಂಡಿದೆ. ರತ್ನಾಭರಣಗಳ ಉದ್ಯಮದಲ್ಲಿ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಶೇ 33.9ರಷ್ಟು ರಫ್ತು ಕುಸಿತ ಕಂಡುಬಂದಿತ್ತು.
ವಿತ್ತೀಯವರ್ಷ 2013ರಲ್ಲಿ ಅಮೆರಿಕಕ್ಕೆ ರಫ್ತಾಗುವ ಸರಕುಗಳಲ್ಲಿ ಶೇ 15ರಷ್ಟು ರತ್ನಾಭರಣಗಳೇ ಇದ್ದವು. ಆದರೆ ವಿತ್ತೀಯ ವರ್ಷ 2025ರಲ್ಲಿ ಈ ಪ್ರಮಾಣ ಶೇ 7ರಷ್ಟು ಕುಸಿದಿದೆ. 2012ರಲ್ಲಿ ಭಾರತದಿಂದ ಅಮೆರಿಕಕ್ಕೆ ಹೋಗುವ ರಫ್ತುಗಳಲ್ಲಿ ಶೇ 18.5ರಷ್ಟು ಸರಕುಗಳು ರತ್ನಾಭರಣಗಳೇ ಆಗಿದ್ದವು. ಇದೀಗ ಈ ಸಂಖ್ಯೆ ಶೇ 11.5ಕ್ಕೆ ಕುಸಿದಿದೆ.
ಸಿದ್ಧ ಉಡುಪುಗಳ ಕ್ಷೇತ್ರದ ಮೇಲೂ ಬಹಳ ಪರಿಣಾಮ ಬೀರಿದೆ. ಅಮೆರಿಕಕ್ಕೆ ಸಿದ್ಧಉಡುಪುಗಳ ರಫ್ತುಗಳಲ್ಲಿ ಸೆಪ್ಟೆಂಬರ್ ನಲ್ಲಿ ಶೇ 31.1ರಷ್ಟು ಕುಸಿದಿದೆ.
ಉದ್ಯಮ ಮೂಲದ ಅಧಿಕಾರಿಗಳ ಪ್ರಕಾರ ಸುಂಕದ ಕುರಿತ ಅನಿಶ್ಚಿತತೆ ಮತ್ತು ಮೊದಲೇ ಆರ್ಡರ್ ಮಾಡಿರುವವರು ಕೊನೆ ಕ್ಷಣದಲ್ಲಿ ಮಾಡಿರುವ ಬದಲಾವಣೆಗಳು ಅಕ್ಟೋಬರ್ ನಲ್ಲಿ ರಫ್ತು ಕುಸಿತಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳು, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದುರ್ಬಲವಾಗಿರುವಂತಹ ಸಮಸ್ಯೆಗಳ ನಡುವೆ ಸುಂಕದಂತಹ ಹೊಸ ಸಮಸ್ಯೆ ಕಂಡುಬಂದಿರುವುದು ಉದ್ಯಮದ ಕುಸಿತಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ ನಲ್ಲಿ ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳ ರಫ್ತು ಶೇ 32.4ರಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್ ಗಿಂತ ಮೊದಲು ಇದು ಶೇ 8.2ರಷ್ಟು ಏರಿಕೆಯಾಗಿತ್ತು. ಇಂಜಿನಿಯರಿಂಗ್ ಸರಕುಗಳು, ರಾಸಾಯನಿಕಗಳು ಮತ್ತು ಸಿದ್ಧಉಡುಪುಗಳು ರಫ್ತಿನಲ್ಲಿ ಲಾಭ ಗಳಿಸಿದ್ದವು. ಆದರೆ ಸುಂಕ ಹೇರಿಕೆಯ ನಂತರ ಸಿದ್ಧಉಡುಪುಗಳ ರಫ್ತು ಕುಸಿದಿದೆ.
ಸುಂಕದಿಂದ ವಿನಾಯಿತಿ ನೀಡಲಾದ ಪೆಟ್ರೋಲಿಯಂ ಮತ್ತು ಕಚ್ಛಾ ತೈಲಗಳ ಉತ್ಪನ್ನಗಳು ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ಶೇ 19.7ರಷ್ಟು ಕುಸಿದಿದ್ದು, ಸೆಪ್ಟೆಂಬರ್ ನಲ್ಲಿ ಶೇ 46.7ರಷ್ಟು ಏರಿಕೆಯಾಗಿದೆ. ಎಲೆಕ್ಟ್ರಾನಿಕ್ ಸರಕುಗಳಿಗೂ ಸುಂಕದಿಂದ ವಿನಾಯಿತಿ ಇರುವ ಕಾರಣ ಸೆಪ್ಟೆಂಬರ್ ನಲ್ಲಿ ಶೇ 132ರಷ್ಟು ರಫ್ತು ಏರಿಕೆಯಾಗಿದೆ. ಸೆಪ್ಟೆಂಬರ್ ನ ನಂತರ ಈ ಕ್ಷೇತ್ರದಲ್ಲಿ ಶೇ 122ರಷ್ಟು ಪ್ರಗತಿಯಾಗಿದೆ.
ಸುಂಕ ಹೇರಿಕೆಯ ನಂತರ ಅಮೆರಿಕದ ರಫ್ತಿನಲ್ಲಿ ಎಂಜಿನಿಯರಿಂಗ್ ಸರಕುಗಳು ಶೇ 20.5ರಷ್ಟು ಇದ್ದರೆ, ಎಲೆಕ್ಟ್ರಾನಿಕ್ಸ್ ಸರಕುಗಳು ಶೇ 17.5ರಷ್ಟಿದ್ದವು ಮತ್ತು ರಾಸಾಯನಿಕ ಸಂಬಂಧಿತ ಉತ್ಪನ್ನಗಳು ಶೇ 17.4ರಷ್ಟು ಇದ್ದವು.