ತಾಕತ್ತಿದ್ದರೆ ಸದಾನಂದಗೌಡ ಮಂಗಳೂರಿನಿಂದ ಸ್ಪರ್ಧಿಸಲಿ:ಜನಾರ್ದನ ಪೂಜಾರಿ

Update: 2016-01-02 08:57 GMT

ಮಂಗಳೂರು:·ಎತ್ತಿನಹೊಳೆ ಯೋಜನೆ ಜಾರಿಗೆ ಪ್ರಯತ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಅವರಿಗೆ ತಾಕತ್ತಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಸವಾಲೆಸೆದಿದ್ದಾರೆ.
   

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದ ಗೌಡ ಮತ್ತು ವೀರಪ್ಪ ಮೊಯ್ಲಿ ಎತ್ತಿನಹೊಳೆ ಯೋಜನೆಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ತಂತ್ರ ಕುತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ನೇತ್ರಾವತಿ ನದಿ ನೀರನ್ನು ಕುಡಿದಿರುವ ಮಾಜಿ ಮುಖ್ಯಮಂತ್ರಿಗಳಿಬ್ಬರೂ ನೀರನ್ನು ಕೊಟ್ಟ ತಾಯಿಯನ್ನು ಕೊಲ್ಲಲು ಹೊರಟಿದ್ದಾರೆ.ಇವರನ್ನು ದೇವರು ಕ್ಷಮಿಸುವುದಿಲ್ಲ ಎಂದು ಹೇಳಿದರು.
  ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಸೋನಿಯಾಗಾಂಧಿ ನೀಡಿದ ಸೂಚನೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಪಾಲಿಸಿಲ್ಲ. ಕಾಂಗ್ರೆಸ್ ರಾಜ್ಯ ನಾಯಕರು ಕನಿಷ್ಟ ಪಕ್ಷ ಸೋನಿಯಾಗಾಂಧಿಯವರಿಗಾದರೂ ಬೆಲೆ ಕೊಡಲಿ . ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ರಾಜಧರ್ಮ ಪಾಲಿಸುತ್ತಿಲ್ಲ ಎಂದು ಹೇಳಿದರು.
  ಎತ್ತಿನಹೊಳೆ ಜಾರಿಗೆ ವಿರುದ್ದವಾಗಿ ಕರಸೇವೆ ನಡೆಸುತ್ತೇನೆ ಎಂದು ಹೇಳಿಕೊಂಡಿರುವ ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್ ನುಡಿದಂತೆ ನಡೆಯಲಿ. ಅವರು ನುಡಿದಂತೆ ನಡೆದರೆ ತಾನು ಅವರನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.
ಹಾಲಿನ ದರ ಏರಿಕೆ ಮಾಡಿರುವ ರಾಜ್ಯ ಸರಕಾರ ಹಾಲನ್ನು ತೆರಿಗೆಯಿಂದ ಮುಕ್ತಗೊಳಿಸಬೇಕಿತ್ತು. ಹಾಲು ಪೌಷ್ಟಿಕ ಆಹಾರವಾಗಿದ್ದು ಹಾಲಿನ ದರ ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮಹಾಬಲ ಮಾರ್ಲ, ದೀಪಕ್ ಪೂಜಾರಿ, ಲ್ಯಾನ್ಸಿಲಾಟ್ ಪಿಂಟೋ, ಅಖಿಲ ಆಳ್ವ, ಟಿ .ಕೆ .ಸುಧೀರ್, ರಮಾನಂದ ಪೂಜಾರಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News