ರಬ್ಬರ್ ಕೃಷಿಕರ ರಕ್ಷಣೆಗೆ ಸರಕಾರ ಮಧ್ಯಪ್ರವೇಶಿಸದಿದ್ದರೆ ಹೋರಾಟ

Update: 2016-01-02 17:27 GMT

ಬೆಳ್ತಂಗಡಿ, ಜ.2: ರಬ್ಬರ್ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕೃಷಿಕರು ಆತಂಕದಲ್ಲಿ ಬದುಕನ್ನು ನಡೆಸುಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಕೃಷಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್‌ನ ಕೇಂದ್ರೀಯ ಸಮಿತಿಯ ಅಧ್ಯಕ್ಷ ಸೇವಿಯರ್ ಪಾಲೇಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವರ್ಷಗಳ ಹಿಂದೆ 1ಕೆ.ಜಿ. ರಬ್ಬರ್‌ಗೆ 250ರೂ. ಇತ್ತು, ಇದೀಗ ಕೇವಲ 100 ರೂ.ಗೆ ಇಳಿದಿದೆ. ಕನಿಷ್ಠ 200 ರೂ. ದರವಾದರೂ ಸಿಗದಿದ್ದಲ್ಲಿ ರೈತರು ಬದುಕನ್ನು ನಡೆಸುವುದು ಕಷ್ಟವಾಗಲಿದೆ.

ಆದ್ದರಿಂದ ಸರಕಾರ ರಬ್ಬರ್‌ಗೆ ರೂ. 200 ರಂತೆ ಬೆಂಬಲ ಬೆಲೆ ಘೋಷಿಸಿ ರಬ್ಬರ್ ಖರೀದಿಗೆ ಕ್ರಮ ಕೈಗೊಳ್ಳ ಬೇಕು. ಕೃಷಿಕರ ಸಾಲವನ್ನು ಮನ್ನಾ ಮಾಡಬೇಕು ಮುಂತಾದ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಗಮನಕ್ಕೆ ತರಲು ಸಂಘಟನೆಯ ವತಿಯಿಂದ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಕಾರ್ಡ್ ಚಳವಳಿಯನ್ನು ಹಮ್ಮಿಕೊಂಡಿದೆ. ಈಗಾಗಲೆ ಸುಮಾರು ಹತ್ತು ಸಾವಿರ ಮಂದಿ ಸದಸ್ಯರು ಅಂಚೆಯ ಮೂಲಕ ಪತ್ರಗಳನ್ನು ಕಳುಹಿಸಿದ್ದಾರೆ ಎಂದು ಸೇವಿಯರ್ ಪಾಲೇಲಿ ಹೇಳಿದರು. ರಾಜ್ಯದ ಆರು ಜಿಲ್ಲೆಗಳ ಸುಮಾರು 50 ಸಾವಿರ ಕೃಷಿಕ ಕುಟುಂಬಗಳು ರಬ್ಬರ್ ಬೆಳೆಯಲ್ಲಿ ನಿರತರಾಗಿದ್ದಾರೆ. ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಸಾವಿರಾರು ಮಂದಿ ಕಾರ್ಮಿಕರು ಇದನ್ನು ಅವಲಂಬಿಸಿಕೊಂಡು ಬದುಕನ್ನು ನಡೆಸುತ್ತಿದ್ದಾರೆ. ಹಲವಾರು ಭಾರಿ ಕೃಷಿಕರ ಸಂರಕ್ಷಣೆ ಬಗ್ಗೆ ಸರಕಾರಗಳಿಗೆ ಮನವಿಗಳನ್ನು ಸಲ್ಲಿಸಲಾಗಿದ್ದರೂ ಯಾರೂ ಈ ವಿಚಾರದಲ್ಲಿ ರೈತರ ಪರವಾಗಿ ಮಾತನಾಡುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ರಬ್ಬರ್ ಕೃಷಿಕರು ಮತ್ತು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಬರಲಿದ್ದು ಸರಕಾರಗಳನ್ನು ಎಚ್ಚರಿಸಲು ಜನವರಿಯಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಬೆಳ್ತಂಗಡಿ ಹಾಗೂ ಮಂಗಳೂರಿನಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸೇವಿಯರ್ ನುಡಿದರು.
ಸಂಘಟನೆಯ ಮುಖಂಡರುಗಳಾದ ಪ್ರದೀಪ್ ಕೆ.ಸಿ, ವಿ.ಟಿ ಸೆಬಾಸ್ಟಿನ್, ರೋಯಿ ಜೋಸೆಫ್, ಅಲ್ಫೋನ್ಸಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News