ಮದ್ಯ ವ್ಯಸನದಿಂದ ಪ್ರತಿವರ್ಷ 25 ಲಕ್ಷ ಮಂದಿ ಸಾವು: ಪ್ರೊ.ಹಿರೇಗಂಗೆ

Update: 2016-01-02 17:49 GMT

 ಉಡುಪಿ, ಜ.2: ಜಗತ್ತಿನಲ್ಲಿ ಮದ್ಯ ಸೇವನೆಯ ಚಟದಿಂದ ಪ್ರತಿವರ್ಷ ಸರಾಸರಿ 25 ಲಕ್ಷ ಮಂದಿ ಅಸುನೀಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 2012ರಲ್ಲಿ 33 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಮಣಿಪಾಲ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ನವಜೀವನ ಆಪ್ತ ಸಲಹಾ ಕೇಂದ್ರ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ 23ನೆ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆತ್ಮಹತ್ಯೆಗೆ ಯತ್ನಿಸುವ ಶೇ.34 ಮಂದಿ ಮದ್ಯವ್ಯಸನಿಗಳಾಗಿರುತ್ತಾರೆ. ಅದೇ ರೀತಿ ಕೆಲಸಕ್ಕೆ ಗೈರುಹಾಜರಿ ಶೇ.20 ಹಾಗೂ ಕೌಟುಂಬಿಕ ದೌರ್ಜನ್ಯ ಎಸಗುವ ಶೇ.85ರಷ್ಟು ಮಂದಿ ಕುಡಿತದ ಚಟ ಹೊಂದಿದವರಾಗಿದ್ದಾರೆ. ಶೇ.50 ರಷ್ಟು ಮದ್ಯವ್ಯಸನಿಗಳು ಗಲಭೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಯಿಂದ ಶೇ.90ರಷ್ಟು ಮದ್ಯವ್ಯಸನವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಮಾರ್ಗದರ್ಶನ, ಚಿಕಿತ್ಸೆ ಹಾಗೂ ಸ್ವಯಂ ನಿರ್ಧಾರದಿಂದ ಈ ಚಟದಿಂದ ಮುಕ್ತರಾಗಬೇಕು ಎಂದು ಡಾ.ವರದೇಶ ಹಿರೇಗಂಗೆ ಹೇಳಿದರು.
ಆಸ್ಪತ್ರೆಯಲ್ಲಿ ಮಹಿಳಾ ಮದ್ಯವ್ಯಸನ ವಿಮುಕ್ತಿ ವಾರ್ಡ್ ‘ಸ್ಫೂರ್ತಿ’ಯನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಐಎಂಎ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷೆ ಡಾ.ಗೀತಾ ಪುತ್ರನ್ ಭಾಗವಹಿಸಿದ್ದರು. ಆಸ್ಪತ್ರೆಯ ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ, ಡಾ.ದೀಪಕ್ ಮಲ್ಯ ಉಪಸ್ಥಿತರಿದ್ದರು. ಲೋಹಿತ್ ಕೆ. ಸ್ವಾಗತಿಸಿದರು. ಜೀವನ್ ಲೂವಿಸ್ ವಂದಿಸಿದರು. ಪದ್ಮಾ ಹಾಗೂ ಪ್ರಭಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News