ವಿದ್ಯಾರ್ಥಿನಿಯ ಅಸಹಜ ಸಾವಿನ ಪ್ರಕರಣ: ಸಿಐಡಿಯಿಂದ ವಿಚಾರಣೆ

Update: 2016-01-02 18:27 GMT

ಬೆಳ್ತಂಗಡಿ, ಜ.2: ವರ್ಷದ ಹಿಂದೆ ನಡೆದ ಬೆಳಾಲು ಗ್ರಾಮದ ಆದರ್ಶ ನಗರ ನಿವಾಸಿ ಕಾಂತಪ್ಪ ಪೂಜಾರಿಯ ಪುತ್ರಿ, ಪೂಂಜಾಲಕಟ್ಟೆ ಸರಕಾರಿ ಪದವಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಶೋಭಿತಾ (20)ಳ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಿಂದ ಸಿಐಡಿ ಅಧಿಕಾರಿ ಎಂ. ಪ್ರಭುಶಂಕರ್ ನೇತೃತ್ವದ ತಂಡ ಶನಿವಾರ ಎರಡನೆ ಬಾರಿ ಬೆಳ್ತಂಗಡಿ ಆಗಮಿಸಿ ಶೋಭಿತಾಳ ಮನೆ ಹಾಗೂ ಸ್ಥಳೀಯರನ್ನು ವಿಚಾರಣೆಗೊಳಪಡಿಸಿದರು. ಇದೀಗ ಮನೆಯವರನ್ನಲ್ಲದೆ ಸ್ಥಳೀಯರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಘಟನೆಯ ವಿವರ:
 ಪೂಂಜಾಲಕಟ್ಟೆ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಬೆಳಾಲು ಗ್ರಾಮದ ನಿವಾಸಿ ಕಾಂತಪ್ಪಪೂಜಾರಿಯ ಮಗಳು ಶೋಭಿತಾ 2014ರ ಜು. 27ರಂದು ಕಾಲೇಜಿನಿಂದ ಬಂದವಳು ಸಂಜೆ 6:30ಕ್ಕೆ ನೆರೆಮನೆಗೆ ಟಿವಿ ನೋಡಲು ಹೋಗಿದ್ದಳು. ಕೆಲವೇ ಹೊತ್ತಿನಲ್ಲಿ ಅಸಹಜವಾದ ರೀತಿಯಲ್ಲಿ ಸಮೀಪದ ಬಾವಿಗೆ ಬಿದ್ದು ಮೃತಪಟ್ಟಿದ್ದಳು. ಬೆಳ್ತಂಗಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರೂ ಪ್ರಕರಣದ ಬಗ್ಗೆ ಯಾವುದೇ ಸುಳಿವುಗಳು ಲಭಿಸಿರಲಿಲ್ಲ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಡತ ಕೊನೆಗೊಳಿಸಲು ಮುಂದಾಗಿದ್ದರು. ಆದರೆ ಸ್ಥಳೀಯ ಗ್ರಾಮಸ್ಥರು ಹಾಗೂ ಮನೆಯವರು ಶೋಭಿತಾ ಕಲಿಕೆಯಲ್ಲಿ ಮುಂದಿದ್ದ, ಒಳ್ಳೆಯ ಗುಣನಡತೆಯ ವಿದ್ಯಾರ್ಥಿನಿಯಾಗಿದ್ದಳು. ಆಕೆ ಆತ್ಮಹತ್ಯೆ ಮಾಡಲು ಯಾವುದೇ ಕಾರಣಗಳಿರಲಿಲ್ಲ, ಇದೊಂದು ಆತ್ಮಹತ್ಯೆ ಪ್ರಕರಣವಲ್ಲ ಎಂಬ ಅನುಮಾನ ವ್ಯಕ್ತಪಡಿಸಿ ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ಶಾಸಕ ವಸಂತ ಬಂಗೇರ ಅವರಲ್ಲಿ ಮನವಿ ಸಲ್ಲಿಸಿದ್ದರು. ಅದರಂತೆ ಶಾಸಕರು ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸುವಂತೆ ಸರಕಾರದ ಮೇಲೆ ಒತ್ತಡ ಹೇರಿದ್ದರು. ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದ್ದು, ಸೆ.6ರಂದು ಸಿಐಡಿ ತಂಡ ಬೆಳ್ತಂಗಡಿಗೆ ಆಗಮಿಸಿ ವಿಚಾರಣೆ ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News