ಡಾ.ರಾಜೇಂದ್ರಕುಮಾರ್‌ಗೆ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಿಂದ ‘ಅತ್ಯುತ್ತಮ ನಾಯಕತ್ವ’ ಪ್ರಶಸ್ತಿ

Update: 2016-01-02 18:32 GMT

ಮಂಗಳೂರು, ಜ.2: ಮೈಕ್ರೋ ಫೈನಾನ್ಸ್ ಹಾಗೂ ಸ್ವಸಹಾಯ ಗುಂಪು ಯೋಜನೆ ಮೈಕ್ರೋ ಫೈನಾನ್ಸ್ ಅನುಷ್ಠಾನದಲ್ಲಿ ದಕ್ಷ ಕಾರ್ಯನಿರ್ವಹಣೆಗೈಯುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್‌ರಿಗೆ ಅಮೆರಿಕದ ಪ್ರತಿಷ್ಠಿತ ‘ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ’ದ ‘ಅತ್ಯುತ್ತಮ ನಾಯಕತ್ವ ಪ್ರಶಸ್ತಿ’ಯನ್ನು ಶನಿವಾರ ಮಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಸಮಾಜಸೇವೆ ಮತ್ತು ಅಧ್ಯಯನ ತಂಡದ ನೇತೃತ್ವ ವಹಿಸಿದ ಪ್ರೊ.ಪೆಮೀಡಾ ಹ್ಯಾಂಡಿ ಅಧ್ಯಯನ ತಂಡದ ಸದಸ್ಯರೊಂದಿಗೆ ರಾಜೇಂದ್ರಕುಮಾರ್‌ರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಸಂಘಗಳ ಮೂಲಕ ಮಾದರಿ ಕಾರ್ಯಕ್ರಮಗಳನ್ನು ಮೈಕ್ರೋ ಫೈನಾನ್ಸ್ ಮೂಲಕ ನಿರ್ವಹಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎಂ.ಎನ್.ರಾಜೇಂದ್ರ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರು.

ಮಹಿಳೆಯರ ಜೀವನದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಗೆ ಪ್ರೇರಕ ಶಕ್ತಿಯಾಗಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಕಾರ್ಯನಿರ್ವಹಿಸಿದ್ದನ್ನು ಅಮೆರಿಕದ ‘ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ’ ಗಮನಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ರಾಜೇಂದ್ರ ಕುಮಾರ್ ಅವರಿಗೆ ನೀಡಿದೆ.

ಪ್ರಶಸ್ತಿ ಪ್ರದಾನ ಸಂದರ್ಭ ಅರುಣಾ ರಾಜೇಂದ್ರ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಸಿಇಒ ವಿಶ್ವನಾಥ್ ನಾಯರ್, ನಿಟ್ಟೆ ವಿಶ್ವವಿದ್ಯಾ ನಿಲಯದ ಪ್ರಾಧ್ಯಾಪಕ ವಿನೋದ್ ದೀಕ್ಷಿತ್, ನವೋದಯ ಟ್ರಸ್ಟ್‌ನ ಸಿಇಒ ಪೂರ್ಣಿಮಾ ಹಾಗೂ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಅಧ್ಯಯನ ತಂಡದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News