ಶಿಕ್ಷಣ ಮತ್ತು ಕ್ರೀಡೆಯಿಂದ ಸ್ವಸ್ಥ ಸಮಾಜ: ಸಚಿವ ಅಭಯ
ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾಟ
ಕೊಣಾಜೆ, ಜ.2: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯೂ ಅತಿ ಮುಖ್ಯ. ಶಿಕ್ಷಣ-ಕ್ರೀಡೆ ಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕ್ರೀಡೆ ಮತ್ತು ಯುವಜನ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ಮಂಗಳೂರು ವಿವಿಯಲ್ಲಿ ಜ.6ರ ತನಕ ನಡೆಯಲಿರುವ ಅಖಿಲಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿರು.
ಶಿಕ್ಷಣದೊಂದಿಗೆ ಕ್ರೀಡಾ ಕ್ಷೇತ್ರಕ್ಕೆ ಇಂದು ಬಹಳಷ್ಟು ಪ್ರೋತ್ಸಾಹ ಸಿಗುತ್ತಿದೆ. ಆದರೆ ಕೆಲವೊಂದು ಕ್ರೀಡೆಗಳಿಗೆ ಜನರ ಒಲವು ಕಡಿಮೆಯಾಗಿ ಮರೆಯಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ. ಇಂತಹ ಕ್ರೀಡೆಗಳಿಗೆ ಮರುಜೀವ ಸಿಗಬೇಕಾದರೆ ವಿಶ್ವವಿದ್ಯಾ ನಿಲಯದ ಮೂಲಕ ಕಾಯಕಲ್ಪ ಸಿಗುವಂತಾಗಬೇಕು ಎಂದು ಹೇಳಿದರು. ಕೆಲವು ದಶಕಗಳ ಹಿಂದೆ ಜಿಲ್ಲೆಯ ಪ್ರತಿ ಪ್ರೌಢಶಾಲೆ, ಹಳ್ಳಿ- ಹಳ್ಳಿಗಳಲ್ಲಿ ಬಾಲ್ ಬ್ಯಾಡ್ಮಿಂಟನ್ ಪಂದ್ಯ ನಡೆಯುತ್ತಿತ್ತು. ಕ್ರಮೇಣ ಟೆನಿಸ್ ಹಾಗೂ ಇತರ ಕಾರಣಗಳಿಂದ ಬಾಲ್ ಬ್ಯಾಡ್ಮಿಂಟನ್ ಮರೆಯಾಗುತ್ತಾ ಬಂತು. ಬಾಲ್ ಬ್ಯಾಡ್ಮಿಂಟನ್ ಆಟವನ್ನು ಉಳಿಸುವ ಕೆಲಸವನ್ನು ವಿವಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಭೈರಪ್ಪಮಾತನಾಡಿ, ಮಂಗಳೂರು ವಿವಿ ದೇಶದ ಇತರ ವಿವಿಗಳಿಗಿಂತ ಭಿನ್ನವಾಗಿ ಕಾರ್ಯಾಚರಿಸುತ್ತಿದ್ದು, ಕ್ರೀಡೆಯಲ್ಲಿ ಉತ್ತಮ ಸಾಧನೆಗೈದವರಿಗೆ ಶೈಕ್ಷಣಿಕ ನೆಲೆಯಲ್ಲಿ ಅತ್ಯುತ್ತಮ ಅವಕಾಶ ಕಲ್ಪಿಸಿದೆ ಎಂದು ನುಡಿದರು. ಮಂಗಳೂರು ವಿವಿಯ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ವಿ.ಶೆಣೈ ಹಾಗೂ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಚ್. ನಾಗಲಿಂಗಪ್ಪ, ಉಪ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ, ಕ್ರೀಡಾಕೂಟ ಸಂಘಟನಾ ಕಾರ್ಯದರ್ಶಿ ಡಾ. ಸಿ. ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ಟಿ.ಡಿ. ಕೆಂಪರಾಜು ಸ್ವಾಗತಿಸಿದರು. ಎ.ಸತೀಶ್ ವಿವಿಧ ತಂಡ ಹಾಗೂ ಖ್ಯಾತ ಕ್ರೀಡಾಪಟುಗಳನ್ನು ಪರಿಚಯಿಸಿ, ಪಥಸಂಚಲನ ವಿಧಿ ನೆರವೇರಿ ಸಿದರು. ಮಂಗಳೂರು ವಿವಿ ಬ್ಯಾಡ್ಮಿಂಟನ್ ತಂಡದ ಕಪ್ತಾನ ಉಲ್ಲಾಸ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಆಂಗ್ಲವಿಭಾಗದ ಪ್ರಾಧ್ಯಾಪಕ ಪ್ರೊ. ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ಕೆ. ಕಿಶೋರ್ ಕುಮಾರ್ ವಂದಿಸಿದರು