ಪ್ರತಿಭಟನಾನಿರತರ ಬಂಧನ; ಹೋರಾಟ ಹತ್ತಿಕ್ಕಲು ಯತ್ನ: ಡಿವೈಎಫ್‌ಐ ಆರೋಪ
ಮಂಗಳೂರು, ಜ.2: ಮಂಗಳೂರಿನ ಎಚ್‌ಪಿಸಿಎಲ್ ಘಟಕದಿಂದ ಆಂಧ್ರಪ್ರದೇಶಕ್ಕೆ ಗ್ಯಾಸ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಚೆರ್ಲವಲ್ಲಿಯಲ್ಲಿ ನಡೆದ ಟ್ಯಾಂಕರ್ ಚಾಲಕನ ಹತ್ಯೆಯನ್ನು ಖಂಡಿಸಿ ಕಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 50 ಮಂದಿಯನ್ನು ಬಂಧಿಸಿರುವ ಪೊಲೀಸರ ಈ ಕ್ರಮವು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಂಗಳವಾರದಿಂದ ಆರಂಭಗೊಂಡಿರುವ ಪ್ರತಿಭಟನೆ ಇಂದು 5ನೆ ದಿನಕ್ಕೆ ಕಾಲಿಟ್ಟದ್ದರೂ ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿಲ್ಲ. ಸುಮಾರು 200 ಮಂದಿ ಟಾಂ್ಯಕರ್ ಮಾಲಕರು ತಮಿಳುನಾಡಿನಿಂದ ಆಗಮಿಸಿದ್ದು, ಅವರೊಂದಿಗೆ ಚರ್ಚಿಸಿ ಪರಿಹಾರ ಕೊಡುವಂತೆ ಆಗ್ರಹಿಸಿದ್ದರೂ ಅವರು ಒಪ್ಪಿಲ್ಲ. ಚೆರ್ಲವಲ್ಲಿ ಘಟನೆಯಲ್ಲಿ ಗಂಭೀರ ಗಾಯಗೊಂಡು ಕೋಮಾವಸ್ಥೆಯಲ್ಲಿರುವ ಟ್ಯಾಂಕರ್ ನಿರ್ವಾಹಕ ತಮಿಳುನಾಡು ಮೂಲದ ತಂಗರಾಜ್ ಚಿಕಿತ್ಸೆಗೆ ಸುಮಾರು 4 ಲಕ್ಷ ರೂ. ಖರ್ಚಾಗಿವೆ.
ಅವರ ವೈದ್ಯಕೀಯ ಚಿಕಿತ್ಸೆಗೆ ಟ್ಯಾಂಕರ್ಸ್ ಮಾಲಕರ ಅಸೋಸಿ ಯೇಶನ್ ಈವರೆಗೂ ನೆರವು ನೀಡದ ಕಾರಣ ಆಸ್ಪತ್ರೆಯ ಬಿಲ್‌ನಿಂದ ಕಂಗೆಟ್ಟ ತಂಗರಾಜ್ ಕುಟುಂಬಸ್ಥರು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೊಳಿಸಿ ಮನೆಗೆ ಕರೆ ತಂದಿದ್ದಾರೆ. ತಂಗರಾಜ್ ಸ್ಥಿತಿ ಚಿಂತಾಜನವಾಗಿದೆ ಎಂದು ಮುನೀರ್ ವಿವರಿಸಿದರು.
ಇಂದು ಕಾನದಿಂದ ಸುರತ್ಕಲ್ ಠಾಣೆವರೆಗೆ ಮೆರವಣಿಗೆ
ಪ್ರತಿಭಟನಾನಿರತ 47 ಮಂದಿಯ ಬಂಧನ ಹಾಗೂ ಡಿವೈಎಫ್‌ಐ ಮತ್ತು ಸಿಐಟಿಯು ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರ ಕ್ರಮದ ವಿರುದ್ಧ ಡಿವೈಎಫ್‌ಐ ನೇತೃತ್ವದಲ್ಲಿ ಜ.3ರಂದು 4 ಗಂಟೆಗೆ ಕಾನದಿಂದ ಸುರತ್ಕಲ್ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.
ಎಸಿಪಿ ಅಮಾನತಿಗೆ ಆಗ್ರಹ
ಘಟನೆಗೆ ಸಂಬಂಧಿಸಿ ಎಸಿಪಿ ಮದನ್ ಗಾಂವ್ಕರ್ ಅವರನ್ನು ಅಮಾನತುಗೊಳಿಸಿ ಪ್ರಕರಣದ ತನಿಖೆಯನ್ನು ಕೈಗೊಳ್ಳಬೇಕೆಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಂಗಳೂರು ದಕ್ಷಿಣ ಘಟಕದ ಕಾರ್ಯದರ್ಶಿ ಸಾದಿಕ್, ಟ್ಯಾಂಕರ್ ಚಾಲಕ ದೊರೈಪಾಂಡೆ ಮೊದಲಾದವರು ಉಪಸ್ಥಿತರಿದ್ದರು.