ಉಡುಪಿ ತಾಪಂನ ಕೊನೆಯ ಸಭೆ: ಸದಸ್ಯರಿಂದ ಅವಲೋಕನ
ಉಡುಪಿ, ಜ.2: ಉಡುಪಿ ತಾಪಂನ ಐದು ವರ್ಷಗಳ ಅವಧಿಯ ಕೊನೆಯ ಸಾಮಾನ್ಯ ಸಭೆ ಇಂದು ತಾಪಂ ಅಧ್ಯಕ್ಷೆ ಸುನೀತಾ ನಾಯ್ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರು ಕಳೆದ ಐದು ವರ್ಷಗಳಲ್ಲಿ ನಡೆಸಿದ ತಾಪಂ ಕಾರ್ಯವೈಖರಿ ಕುರಿತ ಅವಲೋಕನ ನಡೆಸಿದರು.
ಸದಸ್ಯರು, ಅಧಿಕಾರಿಗಳ ಸಹಕಾರಕ್ಕೆ ಅಧ್ಯಕ್ಷರು ಕೃತಜ್ಞತೆಯನ್ನು ಸಲ್ಲಿಸಿದರು. ಕೈಗಾರಿಕೆ ಇಲಾಖೆಯಿಂದ 32 ಮಂದಿಗೆ ಮಂಜೂರಾಗಿರುವ ತಲಾ 5,000 ರೂ. ವೌಲ್ಯದ ಕಿಟ್‌ನ್ನು ಈ ಸಂದರ್ಭ ದಲ್ಲಿ ವಿತರಿಸಲಾಯಿತು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ತಾಪಂ ಸದಸ್ಯ ಕೇಶವ ಗಾಣಿಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸದಸ್ಯ ಸತ್ಯಾನಂದ ನಾಯಕ್ ಮಾತನಾಡಿ, ತೀರ್ಥಹಳ್ಳಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಜನರಿಗೆ ಸಾಕಷ್ಟು ಗೊಂದಲ ಗಳಿದ್ದು, ಈ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಮಂಜುನಾಥ್ ನಾಯಕ್, ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಯ ಮಧ್ಯದಿಂದ 21 ಮೀ. ಅಗಲದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 40 ಮೀ. ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲ್ಲ ಎಂದು ತಿಳಿಸಿದರು.
ಕಡಿಯಾಳಿಯಿಂದ ಆತ್ರಾಡಿಯವರೆಗಿನ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಕೇಂದ್ರ ಸರಕಾರಕ್ಕೆ 96 ಕೋ.ರೂ. ಅನುದಾನದ ಪ್ರಸ್ತಾಪ ಕಳುಹಿಸಲಾಗಿದೆ. ಮುಂದೆ ಆತ್ರಾಡಿಯಿಂದ ಆಗುಂಬೆಯವರೆಗೆ ಮತ್ತು ಆಗುಂಬೆ ಯಿಂದ ತೀರ್ಥಹಳ್ಳಿಯವರೆಗೆ ಎರಡು ಹಂತದಲ್ಲಿ ದ್ವಿಪಥ ಕಾಮಗಾರಿಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಭಾಸ್ಕರ್ ಪಡುಬಿದ್ರೆ ಮಾತನಾಡಿ, ಪಡುಬಿದ್ರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರವೇ ಹೊಣೆ. ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ. ಕಾಮಗಾರಿಯನ್ನು ಜನರಿಗೆ ತೊಂದರೆ ಆಗದಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರವನ್ನು ಬೊಟ್ಟು ಮಾಡಿರುವುದನ್ನು ಆಕ್ಷೇಪಿಸಿದ ದೇವದಾಸ್ ಹೆಬ್ಬಾರ್, ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಎರಡೂ ಹೊಣೆಯಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆಯ ಕೆಲಸ ಅತಿ ಮುಖ್ಯ. ಆದುದರಿಂದ ಕೇಂದ್ರ ಸರಕಾರವನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದರು.
ಉಚ್ಚಿಲಪೇಟೆಯ ಸುಮಾರು ಎರಡು ಕಿ.ಮೀ. ವ್ಯಾಪ್ತಿಯ ಹೆದ್ದಾರಿಯಲ್ಲಿ ಯು ಟರ್ನ್ ಇಲ್ಲದೆ ಜನ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಸಮಸ್ಯೆಯನ್ನು ಹೆದ್ದಾರಿ ಇಲಾಖೆಯವರು ಸರಿಪಡಿಸಬೇಕು ಎಂದು ಸದಸ್ಯೆ ಕೇಸರಿ ಆಗ್ರಹಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಗಣೇಶ್‌ಕುಮಾರ್ ಉದ್ಯಾವರ, ಕಾರ್ಯ ನಿರ್ವಹಣಾಧಿಕಾರಿ ಜೆ.ಸಿ.ಜನಾರ್ದನ, ಸಚಿನ್ ಜಿ. ನಾಯಕ್ ಉಪಸ್ಥಿತರಿದ್ದರು.