ಭೂಮಿ ಒದಗಿಸಿದರೆ ಸಣ್ಣ ಕೈಗಾರಿಕಾ ವಲಯ ಸ್ಥಾಪನೆ: ಮುಹ್ಸಿನ್
ಮಂಗಳೂರು, ಜ.2: ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಸಣ್ಣ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದೆ. ಇದಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ 50 ಎಕರೆ ಹಾಗೂ ತಾಲೂಕು ಕೇಂದ್ರಗಳಲ್ಲಿ 25 ಎಕರೆ ಭೂಮಿಯನ್ನು ಒದಗಿಸುವಂತೆ ಜಿಲ್ಲಾ ಡಳಿತಕ್ಕೆ ಪ್ರಸ್ತಾಪ ಸಲ್ಲಿಸಿದೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕ ಮುಹಮ್ಮದ್ ಮುಹ್ಸಿನ್ ತಿಳಿಸಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯ ಲ್ಲಿಂದು ದ.ಕ. ಮತ್ತು ಉಡಪಿ ಜಿಲ್ಲೆ ವ್ಯಾಪ್ತಿಯಲ್ಲಿರುವ ಕೈಗಾರಿಕಾ ವಸಾ ಹತುಗಳಲ್ಲಿನ ಕೈಗಾರಿಕೋದ್ಯಮಿಗಳ ಕುಂದುಕೊರತೆಯನ್ನು ಆಲಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ದ.ಕ. ಮತ್ತು ಉಡುಪಿ ವ್ಯಾಪ್ತಿ ಯಲ್ಲಿ ಸ್ಥಾಪಿಸಿರುವ ಕೈಗಾರಿಕಾ ವಸಾಹತುಗಳಲ್ಲಿ ಬಹತೇಕ ಎಲ್ಲ ಕೈಗಾರಿಕಾ ಮಳಿಗೆಗಳು ಮತ್ತು ನಿವೇಶನಗಳು ಹಂಚಿಕೆಯಾಗಿವೆ. ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮಳಿಗೆ ಹಾಗೂ ನಿವೇಶನಗಳಿಗೆ ಬೇಡಿಕೆ ಇರು ವುದರಿಂದ ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಸಮಾಲೋಚಿಸಿ ಕನಿಷ್ಠ 100 ರಿಂದ 200 ಎಕರೆ ಜಮೀನು ಮಂಜೂರಾತಿ ಪಡೆದು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಹೊಸ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿ ಸಲಾಗುವುದು. ಇದರಿಂದ 6,000 ಮಂದಿಗೆ ಉದ್ಯೋಗಾವಕಾಶ ದೊರೆ ಯಲಿದೆ ಎಂದವರು ವಿವರಿಸಿದರು. ಸರಕಾರಿ ಜಾಗ ಲಭಿಸಿದರೆ ನಿಗಮವು ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಅವಕಾಶ ನೀಡಲಿದೆ. ನಿಗಮದಲ್ಲಿ ಹಣದ ಕೊರತೆ ಇಲ್ಲವಾ ದರೂ ಸರಕಾರಿ ಭೂಮಿಯನ್ನು ಜಿಲ್ಲಾ ಡಳಿತವೇ ಒದಗಿಸಬೇಕಿದೆ. ಇಲ್ಲವಾ ದಲ್ಲಿ ಮಿತ ದರದಲ್ಲಿ ಖಾಸಗಿ ಜಮೀನು ಖರೀದಿಸಿ ನೀಡಿದರೂ ಸಾಕು, ನಿಗಮ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಲಿದೆ ಎಂದು ಮುಹ್ಸಿನ್ ಹೇಳಿದರು. ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಣ್ಣ ಕೈಗಾರಿಕೋದ್ಯಮಿಗಳ ಸಭೆ ನಡೆ ಸಲಾಗಿದೆ. ಮಳಿಗೆ ಮತ್ತು ನಿವೇಶನಗಳಿಗೆ ಕ್ರಯಪತ್ರ ನೀಡಲು ವಿಳಂಬವಾಗಿರುವ ಬಗ್ಗೆ, ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯ ಕೊರತೆಯ ಬಗ್ಗೆ, ಕೈಗಾರಿಕಾ ಪ್ರದೇಶದ ಗಡಿ ಗುರುತಿಸುವಿಕೆಯಲ್ಲಿ ಲೋಪ ವಾಗಿ ಅತಿಕ್ರಮಣ ನಡೆದಿರುವ ಬಗ್ಗೆ ಉದ್ಯಮಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಈ ಕುರಿತ ಪರಿಶೀ ಲನೆ ನಡೆಸಲಾಗುವುದು ಎಂದರು.
ಸುಮಾರು 6 ಕೋ.ರೂ. ವೆಚ್ಚದಲ್ಲಿ ಯೆಯ್ಯಡಿಯಲ್ಲಿರುವ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಶೇ.20ರಷ್ಟು ಅನುದಾನವನ್ನು ಸರಕಾರ ಭರಿಸಲಿದೆ. ಈ ಪ್ರದೇಶವನ್ನು ಕೈಗಾರಿಕೋದ್ಯಮಿಗಳ ಸಂಘಟನೆಯು ನಿರ್ವಹಿಸಲು ಮುಂದೆ ಬಂದರೆ ಅವರಿಗೆ ನೀಡಲಾಗುವುದು ಎಂದರು. ಪತ್ರಿಕಾಗೋಷ್ಠಿಗೆ ಮೊದಲು ಅವರು ಸಣ್ಣ ಕೈಗಾರಿಕೋದ್ಯಮಿಗಳ ವಿವಿಧ ಸಮಸ್ಯೆಗಳನ್ನು ಆಲಿಸಿದರು. ಕೈಗಾರಿಕಾ ವಲಯದಲ್ಲಿ ಅತಿಕ್ರಮಣ, ಮೂಲ ಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆ, ಕ್ರಯಪತ್ರ ನೋಂದಣಿಗೆ ತೊಡಕು, ಅಧಿಕಾರಿಗಳು ಲಭ್ಯವಿಲ್ಲದೇ ಇರುವ ಬಗ್ಗೆ ಕೈಗಾರಿಕೋದ್ಯಮಿಗಳಿಂದ ಅಸಮಾ ಧಾನ ವ್ಯಕ್ತವಾಯಿತು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಪಂ ಸಿಇಒ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಕೆಸಿಸಿಐ ಅಧ್ಯಕ್ಷ ರಾಮ್ ಮೋಹನ್ ಪೈ ಉಪಸ್ಥಿತರಿದ್ದರು.