ತೆಂಗು ವೌಲ್ಯವರ್ಧನೆಗೆ ರೈತಸಂಘದಿಂದ ಹೊಸ ಯೋಜನೆ
ಸುಳ್ಯ, ಜ.2: ಜಿಲ್ಲೆಯ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೆಂಗಿನ ಉತ್ಪನ್ನಗಳ ವೌಲ್ಯವರ್ಧನೆಯನ್ನು ಗುರಿಯಾಗಿರಿಸಿ ಜಿಲ್ಲೆಯಲ್ಲಿ 2 ಪಬ್ಲಿಕ್ ಲಿಮಿಟೆಡ್ ಕಂಪೆನಿಗಳನ್ನು ಸ್ಥಾಪಿಸುವ ಬೃಹತ್ ಯೋಜನೆಗೆ ಕೈ ಹಾಕಿದೆ.
ಇದಕ್ಕೆ ಪೂರಕವಾಗಿ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಪಯಸ್ವಿನಿ ತೆಂಗು ಬೆಳೆಗಾರರ ಫೆಡರೇಶನ್ ಸ್ಥಾಪನೆ ಕುರಿತು ಚರ್ಚಿಸಲು ಶನಿವಾರ ಸಭೆ ನಡೆಯಿತು.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ.ಜಿ.ಸತ್ಯನಾರಾಯಣ ಸಭೆಯನ್ನು ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಫೆಡರೇಶನ್ ರಚನೆಯ ಉದ್ದೇಶವನ್ನು ವಿವರಿಸಿದರು. ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿಕಿರಣ್ ಪುಣಚ ಮಾತನಾಡಿ, ಮುಂದಿನ 2 ವರ್ಷಗಳೊಳಗೆ 2 ಕಂಪೆನಿಗಳನ್ನು ಆರಂಭಿಸಲಾಗುತ್ತದೆ. ಕಲ್ಪರಸ ಸೇರಿದಂತೆ ತೆಂಗಿನ ಹಲವು ವೌಲ್ಯವರ್ಧಿತ ಉತ್ಪನ್ನಗಳನ್ನು ದೇಶ-ವಿದೇಶಗಳಿಗೆ ರವಾನಿಸುವ ಯೋಜನೆ ಇದಾಗಿದೆ. ಆ ಮೂಲಕ 1 ಲಕ್ಷ ಉದ್ಯೋ ಗಾವಕಾಶ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದರು.