ರಾಯಿ: ಸಾರ್ವಜನಿಕ ರಸ್ತೆ ಅತಿಕ್ರಮಣ ತೆರವು
ಬಂಟ್ವಾಳ, ಜ.2: ರಾಯಿ ಗ್ರಾಮದ ಹೊರಂಗಳದಿಂದ ಲಕ್ಷ್ಮೀಕೋಡಿ, ಮೈದಬೆಟ್ಟು, ಮೂಡುಕೋಡಿ ಸಂಪರ್ಕಿಸುವ ಸಾರ್ವಜನಿಕ ರಸ್ತೆಗೆ ಒಡ್ಡಲಾದ ತಡೆಯನ್ನು ರಾಯಿ ಗ್ರಾಪಂ ಅಕಾರಿಗಳು ಪೊಲೀಸ್ ಬಂದೋಬಸ್ತ್‌ನೊಂದಿಗೆ ಶುಕ್ರವಾರ ತೆರವುಗೊಳಿಸಿದರು. ಸುಮಾರು ವರ್ಷಗಳಿಂದ ಈ ರಸ್ತೆಗೆ ಕಬ್ಬಿಣದ ಗೇಟು ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯ ಗ್ರಾಮಸ್ಥರು ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರಿಗೆ ಲಿಖಿತ ದೂರು ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವರು ಕಂದಾಯ ಹಾಗೂ ಪಂಚಾಯತ್ ಅಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ, ರಾಯಿ ಗ್ರಾಪಂ ಪಿಡಿಒ ಪಿ.ವೆಂಕಟೇಶ್‌ರಿಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು. ರಸ್ತೆ ಅತಿ ಕ್ರಮಣವನ್ನು ತೆರವುಗೊಳಿಸದಿದ್ದಲ್ಲಿ ಸರಕಾರಿ ಕಚೇರಿ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಸಚಿವರ ನಿರ್ದೇಶನದಂತೆ ಕಾರ್ಯೋನ್ಮುಖಗೊಂಡಿರುವ ಅಕಾರಿಗಳು ಶುಕ್ರವಾರ ರಸ್ತೆಗೆ ಅಡ್ಡಲಾಗಿ ರಚಿಸಲಾದ ಕಬ್ಬಿಣದ ಗೇಟನ್ನು ತೆರವುಗೊಳಿಸಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಕಾರಿಗಳ ಸಕಾಲಿಕ ಕಾರ್ಯಾಚರಣೆಯಿಂದ ಸುಮಾರು 50 ಕಿ.ಮೀ. ರಸ್ತೆಯನ್ನು ಕೆಲವೇ ನಿಮಿಷಗಳಲ್ಲಿ ತಲುಪುವಂತಾಗಿದೆ ಎಂದಿರುವ ಸ್ಥಳೀಯ ಗ್ರಾಮಸ್ಥರು ಉಸ್ತುವಾರಿ ಸಚಿವರಿಗೆ, ಗ್ರಾಪಂ ಅಧ್ಯಕ್ಷರಿಗೆ, ಅಕಾರಿಗಳಿಗೆ ಅಭಿನಂದಿಸಿದ್ದಾರೆ. ಕಾರ್ಯಾಚರಣೆಯ ವೇಳೆ ರಾಯಿ ಗ್ರಾಪಂ ಅಧ್ಯಕ್ಷ ದಯಾನಂದ ಸಲ್ಯ, ಉಪಾಧ್ಯಕ್ಷೆ ಪುಷ್ಪಲತಾ, ಪಿಡಿಒ ಪಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.