ಭಯೋತ್ಪಾದನೆ ಕೊನೆಗಾಣಿಸಲು ಬದ್ಧ: ಪಾಕ್ ಸೇನಾ ಮುಖ್ಯಸ್ಥ

Update: 2016-01-02 18:59 GMT

ಕರಾಚಿ, ಜ.2: ರಾಷ್ಟ್ರವನ್ನು ಭಯೋತ್ಪಾದನೆಯಿಂದ ಪಾರು ಮಾಡಲು ತಾನು ಬದ್ಧವಾಗಿರುವುದಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ರಾಹಿಲ್ ಶರೀಫ್ ಶನಿವಾರ ಹೇಳಿದ್ದಾರೆ.
ರಾಷ್ಟ್ರದಲ್ಲಿನ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲಗೊಳಿಸಲಾಗುವುದು ಎಂದವರು ಹೇಳಿದ್ದಾರೆ.
 ಈ ಹೊಸ ವರ್ಷವು ರಾಷ್ಟ್ರಕ್ಕೆ ಭಯೋತ್ಪಾದನೆಯ ಅಂತ್ಯದ ವರ್ಷವಾಗಲಿದೆ ಎಂದು ಮಕ್ರಾನ್ ವಿಭಾಗದ ಗ್ವಾದರ್, ತಲಾರ್ ಹಾಗೂ ತರ್ಬಾತ್ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಸೇನಾ ಮುಖ್ಯಸ್ಥ ತಿಳಿಸಿದ್ದಾರೆ.
 ‘‘ಈ ಸಲದ ಹೊಸ ವರ್ಷವು ರಾಷ್ಟ್ರೀಯ ಸೌಹಾರ್ದ ವರ್ಷವಾಗಲಿದೆ. ಈ ವರ್ಷ ರಾಷ್ಟ್ರವು ಶಾಂತಿ ಹಾಗೂ ನ್ಯಾಯ ಸ್ಥಾಪನೆಗೆ ಸಾಕ್ಷಿಯಾಗಲಿದೆ’’ ಎಂದವರು ಹೇಳಿದ್ದಾರೆ.
 ಮಾತ್ರವಲ್ಲದೆ, ಈ ನಿಟ್ಟಿನಲ್ಲಿ ಇಡೀ ರಾಷ್ಟ್ರವು ಸಶಸ್ತ್ರ ಪಡೆಗಳಿಗೆ ತನ್ನ ಬೆಂಬಲವನ್ನು ವಿಸ್ತರಿಸುವ ಅಗತ್ಯವಿದೆ ಎಂದವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.
ಜನತೆಯ ಬೆಂಬಲದೊಂದಿಗೆ ರಾಷ್ಟ್ರದಲ್ಲಿ ಶಾಂತಿ ಹಾಗೂ ನ್ಯಾಯ ಸ್ಥಾಪನೆಯನ್ನು ಖಾತರಿಪಡಿಸಲಾಗುವುದು ಎಂದು ಸೇನಾ ಮುಖ್ಯಸ್ಥರನ್ನು ಉಲ್ಲೇಖಿಸಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಆರ್ಥಿಕ ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದವರು ಎಚ್ಚರಿಸಿದ್ದಾರೆ.
  ‘‘ಭಯೋತ್ಪಾದನೆ, ಭ್ರಷ್ಟಾಚಾರ ಹಾಗೂ ಅಪರಾಧ ಚಟುವಟಿಕೆಗಳ ನಡುವೆ ಒಂದು ರೀತಿಯ ನಂಟಿದೆ. ಭಯೋತ್ಪಾದನೆ ಹಾಗೂ ಆರ್ಥಿಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರು ಪರಸ್ಪರ ನೆರವಾಗುವ ಉದ್ದೇಶದಿಂದ ತಮ್ಮ ನಡುವಿನ ಸಂಬಂಧಗಳನ್ನು ಬಲಗೊಳಿಸಿದ್ದಾರೆ’’ ಎಂದವರು ಅಭಿಪ್ರಾಯಿಸಿದ್ದಾರೆ.

ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್‌ಗಳು ಹಾಗೂ ಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಚೀನಿ ಪ್ರಜೆಗಳ ಭದ್ರತೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.


ಪಠಾಣ್‌ಕೋಟ್ ದಾಳಿಗೆ ಪಾಕ್ ಖಂಡನೆ
ಇಸ್ಲಾಮಾಬಾದ್, ಜ.2: ಪಂಜಾಬ್‌ನ ಪಠಾಣ್‌ಕೋಟ್‌ನ ವಾಯುನೆಲೆಯ ಮೇಲೆ ಉಗ್ರರು ನಡೆಸಿರುವ ದಾಳಿಯನ್ನು ಪಾಕಿಸ್ತಾನ ಖಂಡಿಸಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ಬದ್ಧವಾಗಿರುವುದಾಗಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭಾರತದೊಂದಿಗಿನ ಮೈತ್ರಿ ಮುಂದುವರಿಸುವುದಾಗಿ ಹೇಳಿರುವ ಪಾಕ್, ಉಗ್ರರನ್ನು ಮಟ್ಟಹಾಕುವಲ್ಲಿ ಕಠಿಣ ಕ್ರಮ ಕೈಗೊಳ್ಳಲಿರುವುದಾಗಿ ತಿಳಿಸಿದೆ.
ಹುತಾತ್ಮರಾದ ಭಾರತೀಯ ಯೋಧರಿಗೆ ಸಂತಾಪ ಸೂಚಿಸಲಾಗಿದೆ ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News