ಸೌದಿ: 47 ಮಂದಿಗೆ ಮರಣ ದಂಡನೆ ಜಾರಿ

Update: 2016-01-02 19:01 GMT

ರಿಯಾದ್, ಜ. 2: ಭಯೋತ್ಪಾದನೆ ಆರೋಪ ಸಾಬೀತಾಗಿರುವ 47 ಕೈದಿಗಳ ಮರಣ ದಂಡನೆಯನ್ನು ಸೌದಿ ಅರೇಬಿಯ ಇಂದು ಜಾರಿಗೊಳಿಸಿದೆ. 2011ರಲ್ಲಿ ಸೌದಿ ಅರೇಬಿಯದಲ್ಲಿ ನಡೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಶಿಯಾ ಧರ್ಮಗುರುವೊಬ್ಬರೂ ಇದರಲ್ಲಿ ಸೇರಿದ್ದಾರೆ.

ಮರಣದಂಡನೆಗೊಳಗಾದವರಲ್ಲಿ 45 ಮಂದಿ ಸೌದಿ ನಾಗರಿಕರು, ಓರ್ವ ಚಾಡ್ ರಾಷ್ಟ್ರೀಯ ಹಾಗೂ ಇನ್ನೋರ್ವ ಈಜಿಪ್ಟ್ ಪ್ರಜೆ ಎಂದು ಸರಕಾರಿ ಒಡೆತನದ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.ಎಲ್ಲ ಮೇಲ್ಮನವಿಗಳು ತಿರಸ್ಕೃತಗೊಂಡ ಬಳಿಕ ಶಿಕ್ಷೆಗಳನ್ನು ಜಾರಿಗೊಳಿಸಲು ನ್ಯಾಯಾಲಯ ಆದೇಶವೊಂದನ್ನು ಹೊರಡಿಸಿತು ಎಂದು ಸೌದಿ ಅರೇಬಿಯ ತಿಳಿಸಿದೆ.

ರಾಜಧಾನಿ ರಿಯಾದ್ ಮತ್ತು ಇತರ 12 ನಗರಗಳು ಮತ್ತು ಪಟ್ಟಣಗಳಲ್ಲಿ ಇಂದು ಮರಣ ದಂಡನೆಗೊಳಗಾದವರ ತಲೆ ಕಡಿಯಲಾಯಿತು.
 2015ರಲ್ಲಿ ಸೌದಿ ಅರೇಬಿಯದಲ್ಲಿ ಕನಿಷ್ಠ 157 ಮಂದಿಯ ಮರಣ ದಂಡನೆ ಜಾರಿಯಾಗಿದೆ. ಇರಾನ್ ಆಡಳಿತದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸೌದಿ ಅರೇಬಿಯದ ಖ್ಯಾತ ಶಿಯಾ ಮುಖಂಡ ಶೇಖ್ ನಿಮ್ರ್ ಅಲ್ ನಿಮ್ರ್‌ರನ್ನು ಅಲ್ಲಿನ ಸರಕಾರ ಮರಣದಂಡನೆಗೊಳಪಡಿಸಿರುವುದನ್ನು ಇರಾನ್ ತೀವ್ರವಾಗಿ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News