×
Ad

ಚುಟುಕು ಸುದ್ದಿಗಳು

Update: 2016-01-03 00:46 IST

ಐಎಸ್‌ಐ ಏಜಂಟ್‌ನ ಕಸ್ಟಡಿ ವಿಸ್ತರಣೆ
ಹೊಸದಿಲ್ಲಿ, ಜ. 2: ಭಾರತೀಯ ವಾಯುಪಡೆಯ ಮಾಜಿ ಏರ್‌ಮನ್ ರಂಜಿತ್‌ನ ಪೊಲೀಸ್ ಕಸ್ಟಡಿಯನ್ನು ಇಲ್ಲಿನ ಪಾಟಿಯಾಲ ಹೌಸ್ ನ್ಯಾಯಾಲಯವು ಶನಿವಾರ ಜನವರಿ 4ರವರೆಗೆ ವಿಸ್ತರಿಸಿದೆ.
ಪಾಕಿಸ್ತಾನದ ಐಎಸ್‌ಐ ಜೊತೆಗೆ ನಂಟು ಹೊಂದಿದ ಆರೋಪದಲ್ಲಿ ದಿಲ್ಲಿ ಪೊಲೀಸರು ಆತನನ್ನು ಪಂಜಾಬ್‌ನಿಂದ ಬಂಧಿಸಿದ್ದರು. ಕೇರಳ ನಿವಾಸಿಯಾಗಿರುವ ಆತನನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾದ ಮಹಿಳೆಯೊಬ್ಬಳು ಆತನನ್ನು ಮೋಹದ ಜಾಲದಲ್ಲಿ ಸಿಲುಕಿಸಿ ವಾಯುನೆಲೆಗಳ ಮಾಹಿತಿ ಕಲೆಹಾಕುತ್ತಿದ್ದಳು.
ಆತ ಭಾರತ-ಪಾಕ್ ಗಡಿ ಸಮೀಪದ ಬಟಿಂಡ ವಾಯು ನೆಲೆಯಲ್ಲಿ ಕೆಲಸ ಮಾಡುತ್ತಿದ್ದನು.

ಕ್ಯಾಂಟೀನ್, ನೀರು, ಉಪ್ಪು, ಔಷಧದ ಬಳಿಕ ಈಗ ಬಂದಿದೆ ‘ಅಮ್ಮಾ ಬಿತ್ತನೆ ಬೀಜ’

ಚೆನ್ನೈ,ಜ.2: ಅಮ್ಮಾ ಕ್ಯಾಂಟೀನ್, ಅಮ್ಮಾ ಕುಡಿಯುವ ನೀರು,ಅಮ್ಮಾ ಉಪ್ಪು,ಅಮ್ಮಾ ಫಾರ್ಮಸಿ....ಇವುಗಳ ನಂತರ ಈಗ ರೈತರಿಗಾಗಿ ಬಂದಿದೆ ‘ಅಮ್ಮಾ ಬಿತ್ತನೆ ಬೀಜ’. ರೈತರ ಏಳಿಗೆಗಾಗಿ 2014ರಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ‘ಅಮ್ಮಾ ಬೀಜಗಳು’ಯೋಜನೆಯ ಬಗ್ಗೆ ಪ್ರಕಟಿಸಿದ್ದ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಇತ್ತೀಗೆ ಇಲ್ಲಿ ಮೂವರು ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ. ರೈತರಿಗೆ ಉತ್ತಮ ಗುಣಮಟ್ಟದ, ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ರಾಜ್ಯ ಸರಕಾರವು ಶನಿವಾರ ಇಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.


ಅಮ್ಮಾ ಸರ್ವಿಸ್ ಸೆಂಟರ್‌ಗಳ ಮೂಲಕ ರೈತರಿಗೆ ಅಮ್ಮಾ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ತಮಿಳುನಾಡು ಬೀಜ ಅಭಿವೃದ್ಧಿ ಸಂಸ್ಥೆಯು ಯೋಜನೆಯ ನೋಡಲ್‌ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತಿದೆ.


ಗ್ವಾಟೆಮಾಲಾ ಜೈಲಿನೊಳಗೆ ಸಂಘರ್ಷ: 8 ಮಂದಿಯ ಸಾವು

ಗ್ವಾಟೆಮಾಲಾ ಸಿಟಿ, ಜ.2: ಗ್ವಾಟೆಮಾಲಾದ ಜೈಲೊಂದರಲ್ಲಿ ಕೈದಿಗಳ ನಡುವೆ ಸಂಭವಿಸಿದ ಸಂಘರ್ಷಕ್ಕೆ ಕನಿಷ್ಠ 8 ಕೈದಿಗಳು ಮೃತಪಟ್ಟು ಇತರ 20 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕೈದಿಗಳು ಅತಿಯಾದ ಮದ್ಯಪಾನ ಮಾಡಿ ಹಿಂಸಾಚಾರಕ್ಕೆ ತೊಡಗಿದ್ದರು ಎನ್ನಲಾಗಿದೆ. ಇಬ್ಬರು ಕೈದಿಗಳನ್ನು ಸಹಕೈದಿಗಳು ಶಿರಚ್ಛೇದಗೈದಿರುವುದಾಗಿ ವರದಿ ತಿಳಿಸಿದೆ.

ಕೆರಿಬಿಯನ್ ಕರಾವಳಿಯ ಪುಯೆತ್ರೊ ಬಾರಿಯಸ್ ಬಂದರು ಪಟ್ಟಣದಲ್ಲಿರುವ 175 ಕೈದಿಗಳಿಗೆ ಅವಕಾಶವಿರುವ ಜೈಲಿನಲ್ಲಿ ಪ್ರಸಕ್ತ 900ಕ್ಕೂ ಅಧಿಕ ಕೈದಿಗಳನ್ನು ಇರಿಸಲಾಗಿದೆ.

‘ಕಿಸ್ ಸ್ಟ್ರೀಟ್’ ಪ್ರತಿಭಟನೆಯಲ್ಲಿ ಘರ್ಷಣೆ; 31 ಮಂದಿ ಬಂಧನ
ಕಲ್ಲಿಕೋಟೆ, ಜ. 2: ಹೊಸ ವರ್ಷದ ಆರಂಭದ ದಿನದಂದು ಕ್ರಾಂತಿಕಾರಿಗಳೆಂದು ತಮ್ಮನ್ನು ಕರೆದುಕೊಳ್ಳುವ ‘ನಿಜತ್ತುವೇಲ’ ಸಂಘಟನೆಯ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಕಾರ್ಯಕರ್ತರ ನಡುವೆ ಕಲ್ಲಿಕೋಟೆಯಲ್ಲಿ ಘರ್ಷಣೆ ನಡೆದಿದೆ.

ನಿಜತ್ತುವೇಲ ಕಾರ್ಯಕರ್ತರು ಮನಂಚಿರದ ಕಿಡ್‌ಸನ್ ಕಾರ್ನರ್‌ನಲ್ಲಿ ‘ಕಿಸ್ ಸ್ಟ್ರೀಟ್’ ಪ್ರತಿಭಟನೆ ನಡೆಸಲು ಸೇರಿದ್ದರು. ಇದನ್ನು ಪ್ರತಿಭಟಿಸಿ ಹನುಮಾನ್ ಸೇನೆಯ ಕಾರ್ಯಕರ್ತರು ಅವರೊಂದಿಗೆ ಘರ್ಷಣೆಗಿಳಿದರು. ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು 31 ಮಂದಿಯನ್ನು ಬಂಧಿಸಿದ್ದಾರೆ. ಸಮಾಜದಲ್ಲಿ ಬೆಳೆಯುತ್ತಿರುವ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಹಾಗೂ ‘ಮಂಗಳಸೂತ್ರ’ದಂಥ ಮೇಲ್ಜಾತಿಯ ಸಂಕೇತಗಳನ್ನು ಹೋಗಲಾಡಿಸಬೇಕೆಂದು ಒತ್ತಾಯಿಸಿ ಕಿಸ್ ಸ್ಟ್ರೀಟ್ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News