×
Ad

ಪಠಾಣ್‌ಕೋಟ್: ಗ್ರೆನೇಡ್ ಸ್ಫೋಟದಿಂದ ಲೆಫ್ಟಿನಂಟ್ ಕರ್ನಲ್ ಮೃತ್ಯು

Update: 2016-01-03 12:57 IST

ಪಠಾಣ್‌ಕೋಟ್: ಪಂಜಾಬ್‌ನ ಪಠಾಣ್‌ಕೋಟ್‌ನ ವಾಯುಪಡೆ ನೆಲೆಯ ಮೇಲಿನ ಉಗ್ರರ ದಾಳಿಯಿಂದಾಗಿ ಸಾವನ್ನಪ್ಪಿದ ಸೈನಿಕರ ಸಂಖ್ಯೆ ಏಳಕ್ಕೇರಿದೆ.

ಇಂದು ಬೆಳಗ್ಗೆ ಗ್ರೆನೇಡನ್ನು ನಿಷ್ಕ್ರಿಯಗೊಳಿಸುವ ವೇಳೆ ಅದು ಸ್ಫೋಟಗೊಂಡು ಎನ್‌ಎಸ್‌ಜಿ ಕಮಾಂಡೊ ಲೆಫ್ಟಿನೆಂಟ್ ಕರ್ನಲ್ ನಿರಂಜನ್‌ಕುಮಾರ್ ಸಾವನ್ನಪ್ಪಿದ್ದಾರೆ. ಉಗ್ರರಿಗಾಗಿ ಹುಡುಕಾಟ ನಡೆಸುವ ವೇಳೆ ಈ ಘಟನೆ ಸಂಭವಿಸಿದೆ.

ದಾಳಿಯ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಸೈನಿಕರೂ ಇಂದು ಸಾವನ್ನಪ್ಪಿದ್ದಾರೆ. ನಿನ್ನೆ ಉಗ್ರರೊಂದಿಗಿನ ಮುಖಾಮುಖಿಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದರು.
ಇಂದು ಬೆಳಗ್ಗೆ ಸಂಭವಿಸಿದ ಗ್ರೆನೇಡ್ ಸ್ಫೋಟದಿಂದ ಗಾಯಗೊಂಡ ಮೂವರು ಸೈನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಗ್ರರಿಗಾಗಿ ನಿನ್ನೆಯಿಂದ ಹುಡುಕಾಟ ನಡೆಸಲಾಗುತ್ತಿದೆ. ಇಂದು ಬೆಳಗ್ಗೆ ಮತ್ತೆ ಹುಡುಕಾಟ ಆರಂಭವಾಗಿತ್ತು. ಈ ವೇಳೆ ಉಗ್ರರ ಕೈಯಲ್ಲಿದ್ದ ಎಕೆ47 ರೈಫಲುಗಳು, ಮಾರ್ಟರ್‌ಗಳು, ಗ್ರನೇಡ್, ಜಿಪಿಎಸ್ ಉಪಕರಣಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ವೇಳೆ ಉಗ್ರರ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ. ತನಿಖಾ ಸಂಸ್ಥೆಯ ಸಿಬ್ಬಂದಿ ಈಗಾಗಲೇ ವಾಯುಪಡೆ ನೆಲೆಗೆ ತಲುಪಿದ್ದಾರೆ.

ಉಗ್ರ ದಾಳಿಯ ಹಿಂದೆ ಪಾಕಿಸ್ತಾನ್‌ನ ಜೈಷ್ ಎ ಮುಹಮ್ಮದ್ ಸಂಘಟನೆಯ ಪಾಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂದು ಗೃಹಸಚಿವ ರಾಜ್‌ನಾಥ್ ಸಿಂಗ್ ಈಗಾಗಲೇ ಹೇಳಿದ್ದಾರೆ.

ಅಮೆರಿಕಖಂಡನೆ: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲಿನ ಉಗ್ರರ ದಾಳಿಯನ್ನು ಅಮೆರಿಕ ಖಂಡಿಸಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೈಜೋಡಿಸುವುದಾಗಿ ಅಮೆರಿಕದ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಪಂಜಾಬ್‌ನ ಪಠಾಣ್‌ಕೋಟ ವಾಯುಪಡೆ ನೆಲೆಯ ಮೇಲೆ ನಿನ್ನೆ ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದರು. ದಿನಪೂರ್ತಿ ನಡೆದ ಮುಖಾಮುಖಿಯಲ್ಲಿ ಐವರು ಉಗ್ರರನ್ನು ಸೈನಿಕರು ಕೊಂದಿದ್ದಾರೆ.

ವಾಯುಪಡೆ ನೆಲೆಯಲ್ಲಿರುವ ಮಿಗ್-21, ಮಿಗ್-25 ಯುದ್ಧ ವಿಮಾನಗಳು, ಸೇನಾ ಹೆಲಿಕಾಪ್ಟರ್‌ಗಳನ್ನು ಧ್ವಂಸಮಾಡುವುದು ಉಗ್ರರ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಪಠಾಣ್‌ಕೋಟ್ ವಾಯುಪಡೆ ನೆಲೆ ಪಾಕಿಸ್ಥಾನದ ಗಡಿಯಿಂದ 40 ಕಿ.ಮೀ. ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News