ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ: ಪ್ರಧಾನಿ ಮೋದಿ
ತುಮಕೂರಿನ ಗುಬ್ಬಿಯಲ್ಲಿ ಎಚ್‌ಎಎಲ್ ಲಘು ಯುದ್ಧ ವಿಮಾನ ಕಾರ್ಖಾನೆಗೆ ಶಂಕುಸ್ಥಾಪನೆ
ತುಮಕೂರು: ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿದ ರೀತಿಯಲ್ಲಿಯೇ ರಕ್ಷಣಾ ವಲಯದಲ್ಲಿಯೂ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇಂದು ಶಂಕುಸ್ಥಾಪನೆ ಮಾಡುತ್ತಿರುವ ಎಚ್‌ಎಎಲ್ ವಿಮಾನ ಕಾರ್ಖಾನೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಬಿದರಹಳ್ಳ ಕಾವಲ್ ಬಳಿ ನಿರ್ಮಾಣ ವಾಗುತ್ತಿರುವ ಎಚ್‌ಎಎಲ್ ಲಘು ಯುದ್ಧ ವಿಮಾನ ನಿರ್ಮಾಣ ಕಾರ್ಖಾನೆಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ದೇಶದ ಎರಡನೆ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಘೋಷಣೆ ‘ಜೈಜವಾನ್, ಜೈಕಿಸಾನ್’ನಂತೆ, ರೈತರ ಸತತ ಪರಿಶ್ರಮದ ಫಲವಾಗಿ ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಆದರೆ ‘ಜೈ ಜವಾನ್’ ಘೋಷಣೆ ಇನ್ನೂ ಸಂಪೂರ್ಣವಾಗಿ ಕಾರ್ಯಗತವಾಗಿಲ್ಲ. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಯಲ್ಲಿಯೂ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಎಚ್‌ಎಎಲ್ ಕಾರ್ಖಾನೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ದೇಶದ ರಕ್ಷಣಾಗಾಗಿ ಹಗಲಿರುಳು ಹೋರಾಡುವ ನಮ್ಮ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಬೇಕಿದೆ. ಇದುವರೆಗೂ ನಮ್ಮ ಸೈನ್ಯಕ್ಕೆ ಬೇಕಾದ ಪರಿಕರಗಳನ್ನು ವಿದೇಶದಿಂದ ಕೊಳ್ಳಬೇಕಾಗಿದೆ. 2015ರ ಶಸ್ತ್ರಗಳು ಬೇಕೇಂದರೆ 2020ರವರೆಗೆ ಕಾಯಬೇಕಿದೆ. ಆದ್ದರಿಂದ ನಮ್ಮ ಸೇನೆಗೆ ಅಗತ್ಯವಿರುವ ಪರಿಕರಗಳನ್ನು ನಮ್ಮಲ್ಲಿಯೇ ಉತ್ಪಾದಿಸಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ವಿದೇಶಿ ಒಪ್ಪಂದಗಳು ಏರ್ಪಡುವ ಸಂದರ್ಭದಲ್ಲಿ ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡುವಂತೆ ಷರತ್ತು ವಿಧಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಹೊಸ ವರ್ಷ 2016ರಲ್ಲಿ ಶಂಕುಸ್ಥಾಪನೆಗೊಂಡಿರುವ ಈ ಕಾರ್ಖಾನೆ ರಕ್ಷಣಾ ದೃಷ್ಟಿಯಿಂದ ಹೆಚ್ಚು ಸಹಕಾರಿಯಾಗಲಿದೆ. ಈ ಕಾರ್ಖಾನೆಗೆ ಭಾರತ ಸರಕಾರ ಎಲ್ಲ ರೀತಿಯ ಅರ್ಥಿಕ ನೆರವು ನೀಡಲಿದ್ದು, ಐದು ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಭಾರತೀಯ ತಂತ್ರಜ್ಞಾನದಿಂದ ತಯಾರಾಗುವ ಹೆಲಿಕಾಪ್ಟರ್ 2018ರಲ್ಲಿ ಭೂಮಿಯಿಂದ ಹಾರಬೇಕು. ಮುಂದಿನ 15 ವರ್ಷಗಳಲ್ಲಿ 600 ಹೆಲಿಕಾಪ್ಟರ್ ದೇಶದ ರಕ್ಷಣಾ ವಲಯದಲ್ಲಿ ಕೆಲಸ ಮಾಡುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಈ ನಿರೀಕ್ಷೆಯನ್ನು ಎಚ್‌ಎಎಲ್‌ನ ನುರಿತ ತಂತ್ರಜ್ಞರು, ಎಂಜಿನಿಯರ್‌ಗಳು, ದಕ್ಷ ನೌಕರರು ಸಾಕಾರಗೊಳಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ರಾಜ್ಯಪಾಲ ವಾಜುಬಾಯಿವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್, ಸಿದ್ದೇಶ್ವರ್, ರಾಜ್ಯ ಸಚಿವರಾದ ಡಾ.ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಎಚ್‌ಎಎಲ್ ಅಧ್ಯಕ್ಷ ಸುವರ್ಣರಾಜು, ಕೇಂದ್ರ ರಕ್ಷಣಾ ಇಲಾಖೆ ಉತ್ಪಾದನಾ ವಿಭಾಗದ ಕಾರ್ಯದರ್ಶಿ ಅಶೋಕಕುಮಾರ್ ಗುಪ್ತ, ಸಂಸದ ಎಸ್.ಪಿ.ಮುದ್ದಹನುಮೇಗೌಡ ಉಪಸ್ಥಿತರಿದ್ದರು.