'ಶಿಕ್ವ ಆ್ಯಂಡ್ ಜವಾಬ್ ಶಿಕ್ವ ಕೃತಿ' ಕ್ಯಾಲಿಕಟ್ ನಲ್ಲಿ ಬಿಡುಗಡೆ
ಕ್ಯಾಲಿಕಟ್, ಜ.3: ವಿಶ್ವವಿಖ್ಯಾತ ಸಾಹಿತಿ ,ತತ್ವಜ್ವಾನಿ ಹಾಗೂ ರಾಜಕಾರಣಿ ಸರ್ ಮುಹಮ್ಮದ್ ಇಕ್ಬಾಲ್ ಬರೆದ ‘ಶಿಕ್ವ ಆ್ಯಂಡ್ ಜವಾಬ್ ಶಿಕ್ವ’ ಕೃತಿಯ ಇಂಗ್ಲೀಷ್ ಅನುವಾದ ಬಿಡುಗಡೆ ಕಾರ್ಯಕ್ರಮವು ಇಂದು ಕ್ಯಾಲಿಕಟ್ ನ ರಾಷ್ಟ್ರೀಯ ಹೆದ್ದಾರಿ ತೊಂಡಯಾಡ್ ಬೈಪಾಸ್ ರಸ್ತೆಯಲ್ಲಿರುವ ಹೈಲೈಟ್ ಬಿಸಿನೆಸ್ ಪಾರ್ಕ್ನ ಕಾನ್ಫ್ರೆನ್ಸ್ ಹಾಲ್ನಲ್ಲಿ ನಡೆಯಿತು. ಶಾಸಕ, ಲೇಖಕ ಹಾಗೂ ವಿದ್ವಾಂಸ ಅಬ್ದುಸ್ಸಮದ್ ಸಮದಾನಿ ರವರು ಬಿಡುಗಡೆ ಮಾಡಿದರು ಮಲೇಷ್ಯಾದ ಇಸ್ಲಾಮಿಕ್ ಬುಕ್ ಟ್ರಸ್ಟ್ (ಐಬಿಟಿ) ಪ್ರಕಾಶನದ ಈ ಕೃತಿಯನ್ನು ವಾರ್ತಾಭಾರತಿ ಕನ್ನಡ ದೈನಿಕದ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ಇಂಗ್ಲೀಷ್ಗೆ ಅನುವಾದ ಮಾಡಿದ್ಧಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಬ್ದುಸ್ಸಮದ್ ಸಮದಾನಿ ಅವರು, ಅಲ್ಲಾಮ ಇಕ್ಬಾಲ್ ರ ಸಾಹಿತ್ಯವನ್ನು ಅನುವಾದ ಮಾಡುವುದು ಭಾರಿ ಸವಾಲಿನ ಕೆಲಸ. ಕೇವಲ ಭಾಷಾ ಪ್ರೌಢಿಮೆಯಿಂದ ಅದು ಸಾಧ್ಯವಿಲ್ಲ. ಆದರೆ ಅಬ್ದುಸ್ಸಲಾಮ್ ಪುತ್ತಿಗೆಯವರು ಇಕ್ಬಾಲ್ ರ ಈ ಮಹತ್ವದ ಕೃತಿಯನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಅನುವಾದಿಸಿದ್ದಾರೆ. ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.