ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ
ಬಂಟ್ವಾಳ, ಜ.3: ಜನರಿಂದ ನೇರವಾಗಿ ಆಯ್ಕೆಗೊಂಡ ಸ್ಥಳೀಯಾಡಳಿತಗಳ ಸದಸ್ಯರು ಸಾಮಾನ್ಯ ಸಭೆಗಳಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆ ಮೂಲಕ ಸಭೆಯ ಗೌರವ ಹೆಚ್ಚಿಸಬೇಕು. ಮಾತ್ರವಲ್ಲದೆ ಸಭೆಯ ಕಾರ್ಯಸೂಚಿ ಬಗ್ಗೆ ಪೂರ್ವ ಮಾಹಿತಿ ಪಡೆದು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಪಡೆದು ಜನಸಾಮಾನ್ಯರಿಗೆ ನೆರವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು. ತಾಲೂಕಿನ ಬಿ.ಸಿ.ರೋಡ್ ತಾಪಂನಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ಕೋಟರನ್ನು ತಾಪಂ ವತಿಯಿಂದ ಸನ್ಮಾನಿಸಲಾಯಿತು
ಸದಸ್ಯರ ಆಕ್ರೋಶ: ತಾಲೂಕಿನಲ್ಲಿ ಸಣ್ಣ ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ಗ್ರಾಪಂನಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆಗೊಳಿಸುವ ವೇಳೆ ಅಧಿಕಾರಿ ಸ್ಪಷ್ಟ ಮಾಹಿತಿ ನೀಡದೆ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಕಡೆಗಣಿಸಿದ್ದಾರೆ ಎಂದು ವಿಪಕ್ಷ ಸದಸ್ಯರಾದ ಮಾಧವ ಎಸ್.ಮಾವೆ, ಬಿ.ಪದ್ಮಶೇಖರ ಜೈನ್, ಸಂಪತ್‌ಕುಮಾರ್ ಶೆಟ್ಟಿ ಮತ್ತಿತರರು ಆರೋಪಿಸಿದರು. ಇನ್ನೊಂದೆಡೆ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ 94ಸಿ ಮತ್ತು 94ಸಿಸಿ ಅರ್ಜಿ ಸ್ವೀಕಾರ ಸ್ಥಗಿತಗೊಂಡಿರುವ ಬಗ್ಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತೋಟಗಾರಿಕೆ ಇಲಾಖೆ ವತಿಯಿಂದ 47 ಸಾವಿರ ರೂ. ವೆಚ್ಚದಲ್ಲಿ ಕೈಗೊಂಡ ಸಾರ್ವಜನಿಕ ’ಉದ್ಯಾನವನ’ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗೆ ನಮ್ಮ ಅವಧಿ ಮುಗಿಯುತ್ತಾ ಬಂದಿದ್ದರೂ ಅನುದಾನ ನೀಡುತ್ತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಆರೋಪಿಸಿದರು. ಸದಸ್ಯರಾದ ದಿನೇಶ ಅಮ್ಟೂರು, ಎಪ್ರಿಯಂ ಸಿಕ್ವೇರ, ಆನಂದ ಶಂಭೂರು, ರಮೇಶ ಕುಡ್ಮೇರು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ವಿಲಾಸಿನಿ ಪೂಜಾರಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಐಡಾ ಸುರೇಶ್, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು.