ಪರ್ಯಾಯೋತ್ಸವಕ್ಕೆ ಸಿದ್ಧತೆಗಳು ಅಂತಿಮ: ಸಚಿವ ಸೊರಕೆ
ಉಡುಪಿ, ಜ.3: ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಐದನೆ ಪರ್ಯಾಯೋತ್ಸವಕ್ಕೆ ಸಿದ್ಧತೆಗಳು ಅಂತಿಮಗೊಂಡಿದ್ದು, ಸರಕಾರದ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತವು ಕಾರ್ಯ ಕ್ರಮದ ಯಶಸ್ಸಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ. ಪರ್ಯಾಯ ಪೂರ್ವಭಾವಿಯ ಅಂತಿಮ ಹಂತದ ಸಿದ್ಧತೆಯ ಕುರಿತು ಇಂದು ಉಡುಪಿಯ ಮಠದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪರ್ಯಾಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಿ ಬೆಂಗಳೂರಿನಿಂದ ಉಡುಪಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸುವ ಬಗ್ಗೆ ಮನವಿ ಮಾಡಲಾಗುವುದು. ಜ.5ರಂದು ಶಾಸಕ ಪ್ರಮೋದ್ ಮಧ್ವರಾಜ್‌ರೊಂದಿಗೆ ತೆರಳಿ ಮುಖ್ಯಮಂತ್ರಿಯವರನ್ನು ಪರ್ಯಾಯಕ್ಕೆ ಆಹ್ವಾನಿಸಲಾಗುವುದು. ಚಾರಿತ್ರಿಕವಾದ ಪೇಜಾವರ ಶ್ರೀ ಪರ್ಯಾಯವನ್ನು ನಾಡಹಬ್ಬದಂತೆಯೇ ಆಚರಿ ಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಮಾತ ನಾಡಿ, ಪರ್ಯಾಯದ ಹಿನ್ನೆಲೆಯಲ್ಲಿ ಮೈಕ್ರೋ ಪ್ಲಾನ್ ತಯಾರಿಸಿ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗುವುದು. ಪಾರ್ಕಿಂಗ್ ವ್ಯವಸ್ಥೆಗೆ ಅನು ಕೂಲವಾಗುವಂತೆ ಉಡುಪಿ ಉತ್ಸವವನ್ನು ಜ.16 ರಂದು ಸಂಜೆಯಿಂದ 19ರ ಸಂಜೆಯವರೆಗೆ ರದ್ದುಪಡಿಸಲಾಗುವುದು. ಸಂಚಾರಿ ವ್ಯವಸ್ಥೆಯಿಂದ ಸ್ಥಳೀಯರಿಗೆ ತೊಂದರೆಯಾಗದಂತೆಯೂ ಜಿಲ್ಲಾ ಡಳಿತ ಮುನ್ನೆಚ್ಚರಿಕೆ ವಹಿಸಲಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಕಂಟ್ರೋಲ್ ರೂಂ ಸ್ಥಾಪಿಸಿ ಹೆಚ್ಚಿನ ಪ್ರಚಾರ ನೀಡುವಂತೆ ಮತ್ತು ಮೆರವಣಿಗೆ ವೇಳೆ ಟ್ಯಾಬ್ಲೊ ಬರುವ ದಾರಿಯಲ್ಲಿ ಕೇಬಲ್‌ಗಳಿಂದ ಅಡಚಣೆಯಾಗದಂತೆ ಮುನ್ನಾ ದಿನವೇ ಪೋಲ್‌ಗಳನ್ನು ಬಳಸಿ 15 ಮೀಟರ್‌ನಷ್ಟು ಎತ್ತರವಿರುವ ಟ್ಯಾಬ್ಲೊಗೆ ತಡೆ ಉಂಟುಮಾಡುವ ಕೇಬಲ್‌ಗಳನ್ನು ಪತ್ತೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಫಲಕಗಳನ್ನು ಪ್ರದರ್ಶಿಸುವಂತೆ, ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತೆ ಮಠದ ಸಮಿತಿಯವರು ಸಭೆಯಲ್ಲಿ ವಿನಂತಿಸಿದರು. ಹೊರೆಕಾಣಿಕೆ ಮಾರ್ಗ ಹಾಗೂ ಊಟದ ವ್ಯವಸ್ಥೆ ಹಾಗೂ ವಿಐಪಿಗಳು ಆಗಮಿಸುವ ಮಾಹಿತಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿಗದಿತ ಸಮಯ ಮಿತಿಯೊಳಗೆ ನೀಡಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಜ.4ರಂದು ಸ್ವಾಮೀಜಿ ಪುರಪ್ರವೇಶದ ನಂತರ ರಥಬೀದಿಯಲ್ಲಿ ನಡೆಯುವ ಪೌರಸನ್ಮಾನ ಕಾಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಲೋಬೊ ಸ್ವಾಮೀಜಿಯನ್ನು ಸನ್ಮಾನಿಸಲಿರುವರು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮಾಜಿ ಶಾಸಕರಾದ ರಘುಪತಿ ಭಟ್, ಯು.ಆರ್.ಸಭಾಪತಿ, ಪರ್ಯಾಯ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಭುವನೇಂದ್ರ ಕಿದಿಯೂರು, ಗಣೇಶ, ಮಠದ ದಿವಾನ ರಘುರಾಮ ಆಚಾರ್ಯ ಉಪಸ್ಥಿತರಿದ್ದರು.