ವಿಠ್ಠಲ್ ಮಲೆಕುಡಿಯಗೆ ‘ಮಾನವ ಧರ್ಮಪೀಠ ಸದ್ಭಾವನಾ ಪ್ರಶಸ್ತಿ’
ಬೆಳ್ತಂಗಡಿ, ಜ.3: ನಾಡಿನ ಆದಿವಾಸಿಗಳ ಹಿತ ಏಳಿಗೆಗಾಗಿ ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿ ತಿಯ ರಾಜ್ಯ ಸಹಸಂಚಾಲಕ ವಿಠ್ಠಲ್ ಮಲೆಕುಡಿಯ ರಿಗೆ ಬೆಂಗಳೂರಿನ ನಿಡುಮಾಮಿಡಿ ಮಹಾಸಂಸ್ಥಾನ ಮಠ ‘ಮಾನವ ಧರ್ಮಪೀಠ ಸದ್ಭಾವನಾ ಪ್ರಶಸ್ತಿ-2015’ ನೀಡಿ ಗೌರವಿಸಿದೆ.
ವಿಠ್ಠಲ್ ಮಲೆಕುಡಿಯ ಅವರು ತನ್ನ ಪದವಿ ಶಿಕ್ಷಣದ ಸಂದರ್ಭದಲ್ಲಿಯೇ ನಾಡಿನ ಆದಿವಾಸಿಗಳ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆಯ ವಿರುದ್ಧ ಸ್ವರ ಎತ್ತಿ ಹಲವು ಹೋರಾಟಗಳನ್ನು ಸಂಘಟಿಸಿದ್ದರು. ಆದಿವಾಸಿಗಳ ಮೇಲೆ ನಕ್ಸಲ್ ನಿಗ್ರಹ ದಳ ನೀಡುತ್ತಿದ್ದ ಕಿರುಕುಳದ ವಿರುದ್ಧ ನಿರಂತರವಾಗಿ ಸ್ವರ ಎತ್ತಿದ್ದರು. ಇದೇ ಕಾರಣಕ್ಕಾಗಿ 2012 ಮಾರ್ಚ್ 3ರಂದು ವಿಠ್ಠಲ್ ಮಲೆಕುಡಿಯರ ಮೇಲೆ ನಕ್ಸಲ್ ಸಂಪರ್ಕದ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಲಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಬಂದ ಅವರು ಮತ್ತೆ ಆದಿವಾಸಿಗಳ ಮಧ್ಯೆ ಸಂಘಟನೆಯನ್ನು ಬೆಳೆಸಿಅವರ ಏಳಿಗೆಗಾಗಿ ಹಲವು ರೀತಿಯ ಹೋರಾಟಗಳನ್ನು ಕೈಗೊಂಡಿದ್ದರು.
ಇತ್ತೀಚೆಗೆ ನೆರಿಯದಲ್ಲಿ ನಡೆದ ಸುಂದರ ಮಲೆಕುಡಿಯರ ಕೈ ಕತ್ತರಿಸಿದ ಪ್ರಕರಣದ ಬಗ್ಗೆಯೂ ನಿರಂತರವಾಗಿ ಹೋರಾಟಗಳನ್ನು ಸಂಘಟಿಸಿದ್ದರು. ಅವರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಕಾರ್ಯದರ್ಶಿಯಾಗಿ, ರಾಜ್ಯ ಸಹಸಂಚಾಲಕರಾಗಿ, ಡಿವೈಎಫ್‌ಐ ಸಂಘಟನೆಯ ತಾಲೂಕು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಮಾನವ ಧರ್ಮಪೀಠವು ಸದ್ಭಾವನಾ ಪ್ರಶಸ್ತಿ 2015ನ್ನು ನೀಡಿ ಗೌರವಿಸಿದೆ.