ಜ.9ರಿಂದ ಕೊಪ್ಪಳದಲ್ಲಿ ದಲಿತರ ಅಧ್ಯಯನ ಶಿಬಿರ
ಉಡುಪಿ, ಜ.3: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಜ.9, 10, 11ರಂದು ಕೊಪ್ಪಳದ ಸರ್.ಎಂ.ವಿಶ್ವೇಶ್ವರಯ್ಯ ಮೆಮೊರಿಯಲ್ ಹಾಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್ ಉದ್ಘಾಟಿಸಲಿರುವರು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾವಚಿತ್ರ ಅನಾವರಣಗೊಳಿಸುವರು. ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ವಹಿಸಲಿದ್ದಾರೆ.
‘ಪ್ರಸ್ತುತ ಭಾರತ, ಕರ್ನಾಟಕ ಸವಾಲುಗಳು ಮತ್ತು ಹೋರಾಟಗಳು’ ಬಗ್ಗೆ ಪತ್ರಕರ್ತ ಸನತ್‌ಕುಮಾರ ಬೆಳಗಲಿ, ‘ಅಂಬೇಡ್ಕರ್-ಲೋಹಿಯಾ ದೃಷ್ಟಿಯಲ್ಲಿ ಜಾತಿವಿನಾಶ’ ಬಗ್ಗೆ ದಿನೇಶ್ ಅಮೀನ್ ಮಟ್ಟು, ‘ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ’ ಕುರಿತು ಪುರುಷೋತ್ತಮ ದಾಸ್, ‘ರಾಜಕಾರಣದಲ್ಲಿ ದಲಿತರು, ರೈತರು, ಕಾರ್ಮಿಕರ ಪಾತ್ರ’ ಬಗ್ಗೆ ವಿಲ್ಫ್ರೆಡ್ ಡಿಸೋಜ, ‘ದಲಿತ ಚಳವಳಿಯ ನಡೆ ಮತ್ತು ಒಗ್ಗೂಡುವಿಕೆಯ ಅನಿವಾರ್ಯತೆ’ ಬಗ್ಗೆ ಮಂಗ್ಳೂರ ವಿಜಯ, ‘ಮಹಿಳಾ ಸಬಲೀಕರಣರಾಜಕೀಯ ಅಧಿಕಾರ’ ಕುರಿತು ಇಂದಿರಾ ಕೃಷ್ಣಪ್ಪ, ‘ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಕ್ಷಣೆಗೆ ಶೋಷಿತ ಶಕ್ತಿಗಳ ಐಕ್ಯಹೋರಾಟ’ ಕುರಿತು ಡಿ.ಶ್ರೀಪಾದ ಭಟ್ ವಿಚಾರ ಮಂಡಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಹಂಪಿ ಕನ್ನಡ ವಿವಿ ಉಪಕುಲಪತಿ ಡಾ. ಮಲ್ಲಿಕಾ ಘಂಟಿ, ಸಚಿವ ಸತೀಶ ಜಾರಕಿಹೊಳಿ ಭಾಗವಹಿಸಲಿರುವರು ಎಂದು ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಮತ್ತು ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.