ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಸೂಚನೆ
Update: 2016-01-04 00:25 IST
ಉಡುಪಿ, ಜ.3: 2016ರ ಜ.1ನ್ನು ಅರ್ಹತೆಯಾಗಿರಿಸಿ ಸಿದ್ಧಪಡಿಸಲಾಗಿರುವ ಬೈಂದೂರು, ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಬಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಜ.11ರಂದು ಪ್ರಕಟಿಸಲಾಗುತ್ತಿದೆ. ನೋಂದಾಯಿತ ಮತದಾರರು ಆಯಾಯ ಬಿಎಲ್‌ಒ ಅವರಿಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಪರಿಶೀಲಿಸಿ ಧೃಢೀಕರಿಸಿಕೊಳ್ಳಬೇಕು. ಅಲ್ಲದೇ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಿ ನಲ್ಲಿ ಪರಿಶೀಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಆಯಾ ತಾಲೂಕಿನ ತಹಶೀಲ್ದಾರ್‌ರನ್ನು ಸಂಪರ್ಕಿಸಬಹುದು.
2015ರ ಸೆ.15ರಿಂದ ಅ.14ರವರೆಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಕಾಲಕ್ಕೆ ನಮೂನೆ 6, 8 ಹಾಗೂ 8ಎ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದಿರುವ ಮತದಾರರಿಗೆ ಬಿಎಲ್‌ಒ ಮೂಲಕ ಮತದಾರರ ಗುರುತಿನ ಚೀಟಿಯನ್ನು (ಎಪಿಕ್) ವಿತರಣೆ ಮಾಡುವ ಕಾರ್ಯ ಈಗಾಗಲೇ ಪ್ರಾರಂಭಗೊಂಡಿದೆ. ಇದಕ್ಕಾಗಿ ಸಂಬಂಧಿಸಿದ ಬಿಎಲ್‌ಒರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.