×
Ad

ಉದ್ಯಮವಾಗಿ ಬೆಳೆಯುತ್ತಿರುವ ಮೀನು ಕೃಷಿ!

Update: 2016-01-04 00:32 IST

ವಿನೋದ್ ಪುದು

ಮಂಗಳೂರು, ಜ.3: ಮನೆ, ಕಚೇರಿಯ ಅಂದ ವನ್ನು ಹೆಚ್ಚಿಸಲು ಅಕ್ವೇರಿಯಂ ಬಳಕೆ ಇದೀಗ ಸಾಮಾನ್ಯವಾಗಿದೆ. ಈ ಅಕ್ವೇರಿಯಂಗಳಲ್ಲಿ ಈಜಾಡುವ ಆಕರ್ಷಕ ಬಣ್ಣ ಬಣ್ಣದ ಮೀನುಗಳು ಮನಸ್ಸಿಗೂ ಮುದವನ್ನು ನೀಡುತ್ತವೆ. ಇತ್ತೀಚೆಗೆ ಇಂತಹ ಆಕರ್ಷಕ ಮೀನುಗಳ ಉತ್ಪಾದನೆ ಕೃಷಿಕರ ಆದಾಯವನ್ನು ಹೆಚ್ಚಿಸುವ ಉದ್ಯಮವಾಗಿ ಬೆಳೆಯುತ್ತಿದೆ.

ಸಣ್ಣ ಜಾಗದಲ್ಲಿ ಆಲಂಕಾರಿಕ ಮೀನುಗಳ ಉತ್ಪಾದನೆ ಮಾಡಿ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿರುವುದರಿಂದ ಈ ಮೀನುಗಳ ಸಾಕಣೆಯೂ ಹೆಚ್ಚಿನವರನ್ನು ಆಕರ್ಷಿಸುತ್ತಿದೆ. ಬಣ್ಣ ಬಣ್ಣ ಬಾಲದ ಗಪ್ಪಿಮೀನು, ಮೈಕುಲುಕುವ ಬಂಗಾರದ ಮೀನು, ಸೋಮಾರಿಯಂತೆ ಕಾಲ ಕಳೆಯುವ ಚಪ್ಪಟೆ ಏಂಜಲ್ ಮೀನು, ಮುತ್ತು ಗೌರಮಿ ಮೀನು, ಟೈಗರ್ ಬಾರ್ಬ್ ಮೀನು, ಜೀಬ್ರಾ ಮೀನು, ಸ್ವಾರ್ಡ್ ಟೈಲ್ ಮೀನು, ಟೆಟ್ರಾ ಮೀನು, ಎಕ್ಸ್‌ರೇ ಮೀನು ಹೀಗೆ ಆಲಂಕಾರಿಕ ಮೀನುಗಳ ಉತ್ಪಾದನೆ ಮಾಡುವ ಮೂಲಕ ಹಲವರು ತಮ್ಮ ಆದಾಯವನ್ನು ಹೆಚ್ಚಿ ಸಿಕೊಂಡಿದ್ದಾರೆ.

ಎರಡು ವಿಧಗಳಲ್ಲಿ ಆಲಂಕಾರಿಕ ಮೀನುಗಳ ಉತ್ಪಾದನೆ ಮಾಡಲು ಸಾಧ್ಯವಿದೆ. ಗಪ್ಪಿ, ಬ್ಲಾಕ್ ಮೋಲಿ, ಸೈಲ್‌ಫಿನ್ ಮೋಲಿ, ಸ್ವಾರ್ಡ್ ಟೈಲ್, ಪ್ಲಾಟಿ ಮರಿ ಹಾಕುವ ಮೀನುಗಳಾಗಿವೆ. ಆರು ತಿಂಗಳೊಳಗೆ ಪ್ರಬುದ್ಧಾವಸ್ಥೆಗೆ ಬರುವ ಬಂಗಾರದ ಮೀನು, ರೋಸಿಬಾರ್ಬ್, ರಾಸ್‌ಬೋರಾ, ಡೇನಿಯೋ, ಏಂಜಲ್, ಪೈಟರ್, ಗೊರಮಿ ಮುಂತಾದ ಮೊಟ್ಟೆ ಹಾಕುವ ಮೀನುಗಳಾಗಿವೆ. ಆರಂಭದಲ್ಲಿ ಆಲಂಕಾರಿಕ ಮೀನುಗಳ ಉತ್ಪಾದನೆಯಲ್ಲಿ ತೊಡಗುವವರು ಮರಿ ಹಾಕುವ ಮೀನುಗಳ ಉತ್ಪಾದನೆ ಮಾಡುವುದು ಉತ್ತಮವೆನ್ನುವುದು ಮೀನು ಕೃಷಿ ವಿಜ್ಞಾನಿಗಳ ಅಭಿಪ್ರಾಯ.

ಜೀವಂತ ಮರಿಗಳನ್ನು ಹಾಕುವ ಮೀನುಗಳು ವರ್ಷವಿಡೀ ಸಂತಾನೋತ್ಪತ್ತಿ ಮಾಡುತ್ತವೆ. ಮೊಟ್ಟೆ ಹಾಕುವ ಮೀನುಗಳು ಆರು ತಿಂಗಳೊಳಗೆ ಪ್ರಬುದ್ಧಾವಸ್ಥೆಗೆ ಬಂದು ಸುಮಾರು ಆರು ಅಥವಾ ಏಳು ವರ್ಷದವರೆಗೆ ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಮೀನುಗಳು ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಮತ್ತು ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ಸಂತಾನೋತ್ಪತ್ತಿ ಮಾಡುತ್ತವೆ.

ಆಲಂಕಾರಿಕ ಮೀನು ಉತ್ಪಾದನೆಗೆ ಹೆಚ್ಚಿನ ಸ್ಥಳದ ಅಗತ್ಯವಿಲ್ಲ. ಮನೆಯ ಹತ್ತಿರವಿರುವ ಅಂಗಳದಲ್ಲಿ ಅಥವಾ ಹಿತ್ತಲಿನಲ್ಲಿ 500 ಲೀ. ನೀರನ್ನು ಶೇಖರಿಸುವ ಸಿಮೆಂಟಿನ ತೊಟ್ಟಿಗಳಲ್ಲಿ ಮೀನುಗಳ ಉತ್ಪಾದನೆ ಮಾಡಬಹುದಾಗಿದೆ, ತೊಟ್ಟಿಯಲ್ಲಿರುವ ಮೀನುಗಳನ್ನು ಪಕ್ಷಿಗಳಿಂದ ರಕ್ಷಣೆ ಮಾಡಲು ಹಾಗೂ ನೇರ ಬಿಸಿಲು ಬೀಳದಂತೆ ತಡೆಯಲು ತೆಂಗಿನ ಗರಿ ಅಥವಾ ಬಲೆಯನ್ನು ಮೇಲ್ಬದಿಗೆ ಹಾಕಬಹುದು.

 ಮೀನುಮರಿ ಉತ್ಪಾದನೆ ಸಮಯದಲ್ಲಿ ಒಂದೇ ಜಾತಿಯ ಸುಮಾರು 20 ಪ್ರೌಢಾವಸ್ಥೆಯ ಹೆಣ್ಣು ಮೀನು ಮತ್ತು 5 ಗಂಡು ಮೀನುಗಳನ್ನು ಒಂದು ಸಂತಾನೋತ್ಪತ್ತಿ ಘಟಕದಲ್ಲಿ ಉಪಯೋಗಿಸಬೇಕು. ಪ್ರತಿ ಹೆಣ್ಣು ಮೀನು ವರ್ಷಕ್ಕೆ 6ರಿಂದ 8 ಬಾರಿ ಮರಿ ಮಾಡಿ ಪ್ರತಿ ಬಾರಿ ಸುಮಾರು 30ರಿಂದ 50 ಮರಿಗಳನ್ನು ಹಾಕುತ್ತದೆ. ಸಂತಾನೋತ್ಪತ್ತಿಯ ನಂತರ ಪ್ರೌಢವಸ್ಥೆಯ ಮೀನುಗಳನ್ನು ಹಾಗೂ ಮರಿಗಳನ್ನು ಪ್ರತ್ಯೇಕಿಸಬೇಕು.

  ಮೀನು ಮರಿಗಳಿಗೆ ಸಸ್ಯ ಮತ್ತು ಪ್ರಾಣಿ ಸೂಕ್ಷ್ಮಜೀವಿಗಳಾದ ಇನ್ಫಿಜೋರಿಯಾ, ರೋಟಿಫರ್, ಢಾಪ್ನಿಯಾ ಮತ್ತು ಕ್ಲಾಡೋಸಿರನ್ಸ್, ಎರೆಹುಳು, ಸೊಳ್ಳೆಮರಿ, ಗೆದ್ದಲು ಮೊಟ್ಟೆಗಳನ್ನು ಆಹಾರವಾಗಿ ನೀಡಬಹುದು. ಅಕ್ಕಿತೌಡು, ಶೇಂಗಾ ಹಿಂಡಿ, ಗೆಣಸಿನ ಪುಡಿ, ಅಕ್ಕಿನುಚ್ಚು, ಜೋಳದ ಪುಡಿಗಳಿಂದ ತಯಾರಿಸಿದ ಆಹಾರದ ತುಣುಕು, ಮೊಟ್ಟೆಪುಡಿ ಆಹಾರ, ಗುಳಿಗೆ ಅಥವಾ ಶ್ಯಾವಿಗೆಯಂತಹ ಸಂಸ್ಕರಿತ ಸಿದ್ದ ಆಹಾರವನ್ನು ಮೀನುಮರಿಗಳಿಗೆ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News