ನೇಪಾಳ: ಮಧೇಸಿ ಗುಂಪಿನಲ್ಲಿ ಒಡಕು

Update: 2016-01-03 19:04 GMT

ಕಠ್ಮಂಡು, ಜ.3: ನೇಪಾಳದಲ್ಲಿ ಜಾರಿಗೆ ಬಂದಿರುವ ನೂತನ ಸಂವಿಧಾನದಲ್ಲಿ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ನಾಲ್ಕು ಪ್ರಾದೇಶಿಕ ಪಕ್ಷಗಳ ಒಕ್ಕೂಟ ಮಧೇಸಿ ಮೋರ್ಚಾ ಇಬ್ಭಾಗಗೊಂಡಿರುವುದಾಗಿ ವರದಿಯಾಗಿದೆ.

ಮಧೇಸಿ ಮೋರ್ಚಾದಲ್ಲಿ ನಾಲ್ಕು ಪ್ರಾದೇಶಿಕ ಪಕ್ಷಗಳಿದ್ದು, ಅವುಗಳಲ್ಲಿ ಸದ್ಭಾವನಾ ಪಕ್ಷವು ತೆರೈ ಪ್ರದೇಶದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆಗೆ ಕರೆ ನೀಡಿದೆ.

ನೂತನ ಸಂವಿಧಾನದ ತಿದ್ದುಪಡಿಗಾಗಿ ಆಗ್ರಹಿಸಿ ಕಳೆದ ನಾಲ್ಕು ತಿಂಗಳುಗಳಿಂದ ನೇಪಾಳದ ತೆರೈ ಪ್ರದೇಶದಲ್ಲಿ ಮಧೇಸಿ ಮೋರ್ಚಾ ನೇತೃತ್ವದ ಪ್ರತಿಭಟನೆ ತೀವ್ರವಾಗಿತ್ತು.
 

ನೇಪಾಳ-ಭಾರತ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೇಪಾಳಕ್ಕೆ ಪ್ರಮುಖ ಸರಕುಗಳ ಪೂರೈಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಧೇಸಿ ಮೋರ್ಚಾವು ಗಡಿಯನ್ನು ಕೇಂದ್ರೀಕರಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂದೆಗೆಯಲು ಮುಂದಾಗಿತ್ತು. ಆದರೆ ಪ್ರತಿಭಟನೆಯನ್ನು ವಾಪಸ್ ಪಡೆಯಲು ಸದ್ಭಾವನಾ ಪಕ್ಷ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಿದೆ.


ಪ್ರತ್ಯೇಕ ಪ್ರತಿಭಟನೆಯ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತಗೊಂಡಿದ್ದು, ಸದ್ಭಾವನಾ ಪಕ್ಷವು ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಿರುವುದು ಸಮಂಜಸವಲ್ಲ ಎಂದು ಸಂಘೀಯ ಸಮಾಜವಾದಿ ಫೋರಂನ ಮುಖ್ಯಸ್ಥ ಉಪೇಂದ್ರ ಯಾದವ್ ಹೇಳಿದ್ದಾರೆ.


ಭೂ ಆವೃತ ನೇಪಾಳವು ಜೀವನಾವಶ್ಯಕ ವಸ್ತುಗಳ ತೀವ್ರ ಅಭಾವವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಸರಕು ಸಾಗಾಟಕ್ಕೆ ಉಂಟಾಗಿರುವ ತಡೆಯನ್ನು ತೆರವುಗೊಳಿಸುವಂತೆ ಮಧೇಸಿ ಗುಂಪಿನ ಮೇಲೆ ಭಾರೀ ಒತ್ತಡ ಬೀಳುತ್ತಿದೆ ಎನ್ನಲಾಗಿದೆ.


ಮಧೇಸಿ ಮೈತ್ರಿಕೂಟವು ಸೋಮವಾರ ಸಭೆಯೊಂದನ್ನು ಏರ್ಪಡಿಸಿ ತಾನು ಪ್ರಸಕ್ತ ನಡೆಸುತ್ತಿರುವ ಪ್ರತಿಭಟನೆಯ ಸ್ವರೂಪದಲ್ಲಿ ಮಾಡಬೇಕಾದ ಬದಲಾವಣೆಗೆ ಸಂಬಂಧಿಸಿ ಚರ್ಚಿಸುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News