OPERATION HAWKEYE | ಸಿರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಅಮೆರಿಕ ವಾಯುದಾಳಿ
"ಅಮೆರಿಕದ ಸೈನಿಕರ ಹತ್ಯೆಗೆ ಪ್ರತೀಕಾರ"
PC | timesofindia
ವಾಷಿಂಗ್ಟನ್: ಸಿರಿಯಾದಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಇಬ್ಬರು ಅಮೆರಿಕನ್ ಸೈನಿಕರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ ಶುಕ್ರವಾರ ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ತಾಣಗಳನ್ನು ಗುರಿ ಮಾಡಿ ವಾಯುದಾಳಿ ಆರಂಭಿಸಿದೆ. ಆಪರೇಷನ್ ಹಾಕೇಯ್ ಹೆಸರಿನಲ್ಲಿ ಈ ದಾಳಿ ಆರಂಭಿಸಿದ್ದು, "ಹತ್ಯೆಗೆ ಕಾರಣರಾದ ಭಯೋತ್ಪಾದಕರ ಮೇಲೆ ಇದು ಅತ್ಯಂತ ಗಂಭೀರ ಪ್ರತೀಕಾರ" ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
"ಐಸಿಸ್ ಸಿರಿಯಾದಲ್ಲಿ ಕೆಚ್ಚಿನ ಅಮೆರಿಕನ್ ರಾಷ್ಟ್ರಪ್ರೇಮಿಗಳನ್ನು ಹತ್ಯೆ ಮಾಡಿದ್ದು, ಅತ್ಯಂತ ಗೌರವಯುತ ಸಮಾರಂಭದ ಮೂಲಕ ಅವರ ಪವಿತ್ರ ಆತ್ಮಗಳನ್ನು ನಾನು ಅಮೆರಿಕದ ನೆಲಕ್ಕೆ ನಾನು ಈ ವಾರ ಸ್ವಾಗತಿಸಿದ್ದೆ. ನಾನು ಈಗಾಗಲೇ ಭರವಸೆ ನೀಡಿದಂತೆ ಹತ್ಯೆಗೆ ಕಾರಣರಾದ ಹಂತಕ ಭಯೋತ್ಪಾದಕರ ವಿರುದ್ಧ ಗಂಭೀರ ಪ್ರತೀಕಾರವನ್ನು ಆರಂಭಿಸಿದ್ದೇನೆ" ಎಂದು ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
"ಹಲವು ಸಮಸ್ಯೆಗಳಿಂದ ಬಳಲುತ್ತಿರುವ, ರಕ್ತದಿಂದ ತೊಯ್ದಿರುವ, ಆದರೆ ಐಸಿಸ್ ತೊಡೆದು ಹಾಕಿ, ಐಸಿಸ್ ನ ಭದ್ರನೆಲೆಯಾದ ಸಿರಿಯಾದಲ್ಲಿ ನಾವು ಪ್ರಬಲ ದಾಳಿ ನಡೆಸುತ್ತಿದ್ದೇವೆ. ಸಿರಿಯಾಗೆ ಮರಳಿ ಶ್ರೇಷ್ಠತೆನ್ನು ತಂದುಕೊಡುವ ನಿಟ್ಟಿನಲ್ಲಿ ಕಠಿಣ ಶ್ರಮ ವಹಿಸಿರುವ ವ್ಯಕ್ತಿಯ ನೇತೃತ್ವದ ಸಿರಿಯಾ ಸರ್ಕಾರವನ್ನು ನಾವು ಸಂಪೂರ್ಣ ಬೆಂಬಲಿಸುತ್ತೇವೆ. ಅಮೆರಿಕದ ಮೇಲೆ ದಾಳಿ ನಡೆಸಿದರೆ ಅಥವಾ ದೇಶಕ್ಕೆ ಬೆದರಿಕೆ ಹಾಕಿದರೆ, ಈ ಹಿಂದೆಂದೂ ನಿಮ್ಮ ಮೇಲೆ ಮಾಡದಷ್ಟು ಪ್ರಬಲ ದಾಳಿ ನಡೆಸುತ್ತೇವೆ ಎಂದು ಅಮೆರಿಕದ ಮೇಲೆ ದಾಳಿ ನಡೆಸುವ ಎಲ್ಲ ಭಯೋತ್ಪಾದಕರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಈ ಪ್ರತೀಕಾರದ ದಾಳಿಯ ಘೋಷಣೆಯನ್ನು ಯುದ್ಧವಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿಕೊಂಡಿದ್ದಾರೆ. ಇದು ಯುದ್ಧದ ಆರಂಭವಲ್ಲ; ಪ್ರತೀಕಾರದ ದಾಳಿ. ಟ್ರಂಪ್ ನಾಯಕತ್ವದಲ್ಲಿ ಅಮೆರಿಕ ನಮ್ಮ ಜನರನ್ನು ರಕ್ಷಿಸಲು ಎಂದೂ ಹಿಂಜರಿದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.