×
Ad

ಬಾಹ್ಯಾಕಾಶಕ್ಕೆ ತೆರಳಲಿರುವ ಮೊದಲ ವೀಲ್‌ಚೇರ್ ಬಳಕೆದಾರೆ ಏರೋಸ್ಪೇಸ್ ಇಂಜಿನಿಯರ್ ಮೈಕೆಲಾ ಬೆಂಥೌಸ್

Update: 2025-12-20 08:49 IST

PC | ndtv

ವಾಷಿಂಗ್ಟನ್, ಡಿ. 19: ಬಿಲಿಯನೇರ್ ಸ್ಥಾಪಿಸಿರುವ ಏರೋಸ್ಪೇಸ್ ಸಂಸ್ಥೆ ಸಬ್‌ಆರ್ಬಿಟಲ್ ಐತಿಹಾಸಿಕ ಹೆಜ್ಜೆ ಇಡುತ್ತಿದೆ. ಮೊದಲ ಬಾರಿಗೆ, ವೀಲ್‌ಚೇರ್ ಬಳಸುವ ಏರೋಸ್ಪೇಸ್ ಇಂಜಿನಿಯರ್ ಮೈಕೆಲಾ ಬೆಂಥೌಸ್ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಬ್‌ಆರ್ಬಿಟಲ್ ಹಾರಾಟವನ್ನು ಸಂಸ್ಥೆ ನಡೆಸಲಿದೆ.

ಜರ್ಮನಿಯ ಏರೋಸ್ಪೇಸ್ ಹಾಗೂ ಮೆಕಾಟ್ರಾನಿಕ್ಸ್ ಇಂಜಿನಿಯರ್ ಮೈಕೆಲಾ ‘ಮಿಚಿ’ ಬೆಂಥೌಸ್ ಅವರು ನ್ಯೂ ಶೆಪರ್ಡ್ ರಾಕೆಟ್‌ನ NS-37 ಕಾರ್ಯಾಚರಣೆಯಲ್ಲಿ ಇತರ ಐದು ಮಂದಿಯೊಂದಿಗೆ ಭಾಗವಹಿಸಲಿದ್ದಾರೆ. ಈ ಹಾರಾಟದಲ್ಲಿ ಸಿಬ್ಬಂದಿಯನ್ನು ಭೂಮಿಯಿಂದ ಸುಮಾರು 100 ಕಿಲೋಮೀಟರ್ ಎತ್ತರದಲ್ಲಿರುವ ಕರ್ಮನ್ ರೇಖೆಯಾಚೆಗೆ ಕರೆದೊಯ್ಯಲಾಗುತ್ತದೆ. ಈ ರೇಖೆಯನ್ನು ಬಾಹ್ಯಾಕಾಶದ ಗಡಿಯೆಂದು ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿದೆ.

2018ರಲ್ಲಿ ಮೌಂಟನ್ ಬೈಕಿಂಗ್ ಅಪಘಾತದಲ್ಲಿ ಬೆನ್ನುಹುರಿಗೆ ಗಾಯಗೊಂಡ ಬಳಿಕ ಬೆಂಥೌಸ್ ವೀಲ್‌ಚೇರ್ ಬಳಸುತ್ತಿದ್ದಾರೆ. ದೈಹಿಕ ಅಡಚಣೆಗಳ ನಡುವೆಯೂ ಅವರು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡಿದ್ದಾರೆ.

ಈ ಹಾರಾಟದಲ್ಲಿ ಎಂಜಿನಿಯರ್ ಹ್ಯಾನ್ಸ್ ಕೊಯೆನಿಗ್ಸ್‌ಮನ್, ಉದ್ಯಮಿ ನೀಲ್ ಮಿಲ್ಚ್, ಹೂಡಿಕೆದಾರರಾದ ಜೋಯ್ ಹೈಡ್ ಮತ್ತು ಅಡೋನಿಸ್ ಪೌರೌಲಿಸ್ ಹಾಗೂ ಜೇಸನ್ ಸ್ಟ್ಯಾನ್ಸೆಲ್ ಸಹ ಭಾಗವಹಿಸಲಿದ್ದಾರೆ.

ಮೆಕಾಟ್ರಾನಿಕ್ಸ್, ರೋಬೋಟಿಕ್ಸ್ ಮತ್ತು ಆಟೊಮೇಷನ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಬೆಂಥೌಸ್, ಮ್ಯೂನಿಕ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. 2016ರಿಂದ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅವರು, 2024ರಲ್ಲಿ ಯ ಯಂಗ್ ಗ್ರಾಜುಯೇಟ್ ಟ್ರೈನಿ (YGT) ಆಗಿ ಸೇರಿದ್ದಾರೆ.

ಸುಮಾರು 10ರಿಂದ 12 ನಿಮಿಷಗಳ ಕಾಲ ನಡೆಯುವ ಈ ಹಾರಾಟದಲ್ಲಿ ಕೆಲ ನಿಮಿಷಗಳ ಸೂಕ್ಷ್ಮ ಗುರುತ್ವಾಕರ್ಷಣೆಯ ಅನುಭವ ಲಭಿಸಲಿದೆ. NS-37 ಕಾರ್ಯಾಚರಣೆ ಬ್ಲೂ ಒರಿಜಿನ್ ಸಂಸ್ಥೆಯ 16ನೇ ಮಾನವ ಬಾಹ್ಯಾಕಾಶ ಹಾರಾಟವಾಗಿದ್ದು, ಇದುವರೆಗೆ ಸಂಸ್ಥೆ 86 ಜನರನ್ನು ಬಾಹ್ಯಾಕಾಶ ಗಡಿಯಾಚೆಗೆ ಕರೆದೊಯ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News