ಮೆಲ್ಕಾರ್ ಜಂಕ್ಷನ್ ಅಭಿವೃದ್ಧಿ ಬಗ್ಗೆ ಸಮಾಲೋಚನೆ ಸಭೆ

Update: 2016-01-04 11:15 GMT

ವಿಟ್ಲ : ಬಂಟ್ವಾಳ ತಾಲೂಕಿನ ಮೆಲ್ಕಾರ್ ಜಂಕ್ಷನ್ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖಾಧಿಕಾರಿಗಳ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಸೋಮವಾರ ಮೆಲ್ಕಾರ್‌ನ ಬಿರ್ವಾ ಸೆಂಟರ್‌ನಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಸಚಿವ ರೈ ಮೆಲ್ಕಾರ್ ಜಂಕ್ಷನ್ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಮಾರ್ನಬೈಲು-ಮೆಲ್ಕಾರ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿಗೆ ರಾಜ್ಯ ಬಜೆಟ್‌ನಲ್ಲಿ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ನಿರ್ವಹಿಸಲು ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ಜ 5 ರಂದು ಬೆಳಿಗ್ಗೆ ಕಾಮಗಾರಿ ನಡೆಸಲು ಶಂಕುಸ್ಥಾಪನೆಯೂ ನೆರವೇರಲಿದೆ ಎಂದರು. ಮೆಲ್ಕಾರ್ ಜಂಕ್ಷನ್ ಅಭಿವೃದ್ದಿಗೆ ಇಲಾಖಾಧಿಕಾರಿಗೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ಯಾವುದಾದರೊಂದು ಕೊಡುಗೆಯನ್ನು ನೀಡುವ ಮೂಲಕ ಅಭಿವೃದ್ದಿ ಕಾರ್ಯದಲ್ಲಿ ಸಹಕರಿಸುವಂತೆ ಕರೆ ಕೋರಿದರು. ಈಗಾಗಲೇ ಟ್ರಾಫಿಕ್ ಎಸ್ಸೈ ಅವರ ತುರ್ತು ಕ್ರಮದಿಂದಾಗಿ ಟ್ರಾಫಿಕ್ ಜಂಜಾಟ ನಿಯಂತ್ರಣಕ್ಕೆ ಬಂದಿದ್ದು, ಇದೀಗ ತಲೆದೋರಿರುವ ಧೂಳಿನ ಸಮಸ್ಯೆಗೆ ಹೆದ್ದಾರಿ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿಕೊಂಡು ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು ಹಾಸನ-ಬಿ.ಸಿ.ರೋಡು ಚತುಷ್ಪಥ ಕಾಮಗಾರಿ ಆರಂಭವಾಗುವವರೆಗೂ ಮೆಲ್ಕಾರ್ ಜಂಕ್ಷನ್ ಹೆದ್ದಾರಿ ಇಲಾಖೆಯ ಅಧೀನದಲ್ಲೇ ಇರಲಿದ್ದು, ತುರ್ತು ಕ್ರಮಗಳನ್ನು ಹೆದ್ದಾರಿ ಇಲಾಖೆ ಕೈಗೊಳ್ಳಲಿದೆ. ಚತುಷ್ಪಥ ಕಾಮಗಾರಿ ಆರಂಭವಾಗುವ ವೇಳೆ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಲಿದೆ ಎಂದರು.

ಅಭಿವೃದ್ದಿ ಕಾಮಗಾರಿ ಚಾಲ್ತಿಯಲ್ಲಿರುವಾಗ ತಲೆದೋರುವ ಸಣ್ಣಪುಟ್ಟ ಸಮಸ್ಯೆಗಳನ್ನೇ ಹಿಡಿದುಕೊಂಡು ರಾದ್ದಾಂತ ಮಾಡದಂತೆ ಸಚಿವರು ಸ್ಥಳೀಯ ಸಾರ್ವಜನಿಕರಿಗೆ ಕೋರಿದರು. ಮೆಲ್ಕಾರ್‌ಗೆ ಎಸ್‌ಇಝಡ್ ವತಿಯಿಂದ ಶೌಚಾಲಯ ನಿರ್ಮಾಣ, ರೋಟರಿ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಭರವಸೆ ದೊರೆತಿದೆ ಎಂದ ಸಚಿವ ರೈ ಒಟ್ಟಿನಲ್ಲಿ ಮೆಲ್ಕಾರ್ ಜಂಕ್ಷನ್‌ನ ತುರ್ತು ಅಭಿವೃದ್ದಿಗಾಗಿ ಎಲ್ಲಾ ಇಲಾಖೆಗಳು ಸಂಪೂರ್ಣ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲ, ಹಗ್ಗ-ಜಗ್ಗಾಟದ ಸನ್ನಿವೇಶ ನಿರ್ಮಾಣವಾಗಕೂಡದು. ಮುಂದಿನ ಒಂದು ತಿಂಗಳೊಳಗೆ ಸಮಗ್ರ ಮೆಲ್ಕಾರ್ ಅಭಿವೃದ್ದಿ ಕಾಮಗಾರಿಗಳ ಅನುಷ್ಠಾನ ಪೂರ್ಣಗೊಳ್ಳಬೇಕು ಎಂದು ಸಭೆಯಲ್ಲಿದ್ದ ಎಲ್ಲ ಇಲಾಖಾಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕುಮಾರ್, ಸಹಾಯಕ ಆಯುಕ್ತ ಡಾ ಅಶೋಕ್, ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಶರಣಪ್ಪ, ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ್, ಸಹಾಯಕ ಸಾರಿಗೆ ಅಧಿಕಾರಿ ಗಣಪತಿ ಹೆಗ್ಡೆ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿನಾಯಕ ಹೆಗ್ಡೆ, ಲೋಕೋಪಯೋಗಿ ಇಲಾಖಾ ಇಂಜಿನಿಯರ್‌ಗಳಾದ ಕಾಂತರಾಜ್ ಹಾಗೂ ಉಮೇಶ್ ಭಟ್, ಅರಣ್ಯ ಇಲಾಖಾಧಿಕಾರಿ ಹನುಂತಯ್ಯ, ವಾರ್ತಾಧಿಕಾರಿ ಖಾದರ್ ಷಾ, ಮೆಸ್ಕಾಂ ಇಂಜಿನಿಯರ್ ಸುಕುಮಾರ್, ಪರಿಸರ ಇಲಾಖೆಯ ಪುರಾಣಿಕ್, ಭೂಸ್ವಾಧೀನಾಧಿಕಾರಿ ಮಂಜುನಾಥ್, ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಭಟ್ ಸಹಿತ ಎಲ್ಲ ಇಲಾಖಾಧಿಕಾರಿಗಳು ಮೆಲ್ಕಾರ್ ಅಭಿವೃದ್ದಿ ಸಮಿತಿಯ ಡಾ. ಪ್ರಶಾಂತ್ ಮಾರ್ಲ ಸಭೆಯಲ್ಲಿ ಭಾಗವಹಿಸಿದ್ದರು. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಮಮತಾ ಡಿ.ಎಸ್. ಗಟ್ಟಿ, ಸ್ಥಳೀಯ ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಜೆಸಿಂತಾ, ಪ್ರಮುಖರಾದ ಬಿ.ಎಚ್. ಖಾದರ್, ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಅಲಿ, ಸಂಜೀವ ಪೂಜಾರಿ, ಯೂಸುಫ್ ಕರಂದಾಡಿ, ಸದಾಶಿವ ಬಂಗೇರ, ಚಂಚಲಾಕ್ಷಿ, ಮುಹಮ್ಮದ್ ನಂದರಬೆಟ್ಟು, ಪ್ರವೀಣ್ ಬಿ., ವಾಸು ಪೂಜಾರಿ, ರಾಮಕೃಷ್ಣ ಆಳ್ವ, ಆಹ್ಮದ್ ಬಾವಾ ಯಾಸೀನ್, ದಾಮೋದರ್ ಮೊದಲಾದವರು ಉಪಸ್ಥಿತರಿದ್ದು, ಸೂಕ್ತ ಸಲಹೆಗಳನ್ನು ನೀಡಿದರು. ಸಚಿವರ ಆಪ್ತಸಹಾಯಕ ಚಂದ್ರಶೇಖರ ಪಾತೂರು ಸ್ವಾಗತಿಸಿ, ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ವಂದಿಸಿದರು.

 

       

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News